

ಆಲೂರು: ರಾಜಕೀಯ ಪಕ್ಷಗಳು ಕೇವಲ ಚುನಾವಣೆ ಅಥವಾ ಪ್ರಚಾರ ಕಾರ್ಯಕ್ಕೆ ಸೀಮಿತ ಅಲ್ಲ ಎಂದು ಬಿಜೆಪಿ ಮತ್ತೊಮ್ಮೆ ಸೇವಾ ಚಟುವಟಿಕೆಗಳ ಮೂಲಕ ತನ್ನ ಬದ್ಧತೆ ತೋರಿಸಿಕೊಟ್ಟಿದೆ ಎಂದು ಪಕ್ಷದ ತಾಲೂಕು ಅಧ್ಯಕ್ಷ ಹುಲ್ಲಹಳ್ಳಿ ನಾಗರಾಜ್ ಹೇಳಿದರು.
ಪಟ್ಟಣದ ಕೊನೇಪೇಟೆಯಲ್ಲಿ ಬಿಜೆಪಿ ಯುವ ಮೋರ್ಚಾ ಆಲೂರು-ಕಟ್ಟಾಯ ಮಂಡಲದಿಂದ ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಹುಟ್ಟುಹಬ್ಬದ ಪ್ರಯುಕ್ತ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದ ಪ್ರತಿ ವರ್ಗದ ಕಟ್ಟಕಡೆಯ ವ್ಯಕ್ತಿಗೂ ಸೇವಾ ಚಟುವಟಿಕೆ ತಲುಪುವಂತೆ ಮಾಡುವುದೇ ಈ ಸೇವಾ ಪಾಕ್ಷಿಕದ ಉದ್ದೇಶವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅನೂಪ್ ಜಯರಾಜ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ಅಭಿವೃದ್ಧಿ ಕಡೆ ಹೆಜ್ಜೆ ಇರಿಸುತ್ತಿದೆ. ಕೃಷಿ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ದೇಶ ಮುನ್ನಡೆಯುತ್ತಿದೆ ಎಂದರು.
ಬಿಜೆಪಿ ಹಿರಿಯ ಮುಖಂಡ ಡಾ.ಜಯರಾಜ್ ಮಾತನಾಡಿ, ದೇಶ ಕಂಡ ಅತ್ಯಂತ ಜನಪ್ರಿಯ ಪ್ರಧಾನಿ ನರೇಂದ್ರ ಮೋದಿ ಎಂಬುದನ್ನು ಪ್ರತಿಪಕ್ಷಗಳ ನಾಯಕರು ಒಪ್ಪುತ್ತಾರೆ. ದಿಟ್ಟತನ, ಚಾಣಾಕ್ಷತೆ, ಮಾತುಗಾರಿಕೆ, ತಂತ್ರಗಾರಿಕೆ ಅವರಲ್ಲಿದೆ. ಎಲ್ಲಕ್ಕಿಂತ ದೊಡ್ಡಗುಣ ಎಂದರೆ ಅದು ವಿಶ್ವಾಸಾರ್ಹತೆ ಎಂದು ಅಭಿಪ್ರಾಯಪಟ್ಟರು.
ಪಕ್ಷದ ಜಿಲ್ಲಾ ಉಪಾಧ್ಯಕ್ಷ ಪೂವಯ್ಯ, ಉಮಾ ರವಿಪ್ರಕಾಶ್, ಹಿರಿಯ ಮುಖಂಡ ಡಾ.ಜಯರಾಜ್, ಅಜಿತ್ ಚಿಕ್ಕಣಗಾಲ್, ಜಿಲ್ಲಾ ಯುವ ಮೊರ್ಚಾ ಅಧ್ಯಕ್ಷ ಅನೂಪ್ ರಾಜ್, ಪ್ರಧಾನ ಕಾರ್ಯದರ್ಶಿ ಸಂದೇಶ, ಯುವ ಮೊರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲೇಶ್ ಗೌಡ ಇತರರು ಇದ್ದರು.