ಬೆಂಗಳೂರು: ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಮಾಜಿ ಸಚಿವ ಸುರೇಶ ಕುಮಾರ ಅವರು ಮೈಸೂರಿನಲ್ಲಿ ಇದೇ ಆಗಸ್ಟ್ 12 ರಂದು ನಡೆಯಲಿರುವ ವಕೀಲರ ಸಮ್ಮೇಳನದ ಕುರಿತು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಮೇಶ ಬಾಬು ಅವರು ತಿರುಗೇಟು ನೀಡಿದ್ದಾರೆ.
ಹೈಕೋರ್ಟ್ ರಜಿಸ್ಟ್ರಾರ್‌ಗೆ ಪತ್ರ ಬರೆದಿರುವ ಅವರು, ಸುರೇಶಕುಮಾರ ಅವರ ನಿಲುವನ್ನು ಖಂಡಿಸಿದ್ದಾರೆ. ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ವತಿಯಿಂದ ರಾಜ್ಯ ಮಟ್ಟದ ವಕೀಲರ 10ನೇ ಸಮ್ಮೇಳನ ಇದೇ ಆಗಸ್ಟ್ 12 ರಂದು ಮೈಸೂರಿನಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಈ ಸಮಾರಂಭದಲ್ಲಿ ನ್ಯಾಯಾಂಗದ ಹಿರಿಯ ನ್ಯಾಯಾಧೀಶರು, ನ್ಯಾಯಮೂರ್ತಿಗಳು, ಉಪ ಮುಖ್ಯಮಂತ್ರಿ, ಕಾನೂನು ಸಚಿವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಆದರೆ ಸುರೇಶಕುಮಾರ ಅವರು ಬರೆದಿರುವ ಪತ್ರ ರಾಜಕೀಯ ಪ್ರೇರಿತವಾಗಿದ್ದು, ವಕೀಲರ ಸಮುದಾಯವನ್ನು ಮತ್ತು ವಕೀಲರ ಕಾರ್ಯಕ್ರಮವನ್ನು ಟೀಕಿಸುವ ಪ್ರಯತ್ನವಾಗಿದೆ.ಜತೆಗೆ ವಕೀಲರ ಹಿತರಕ್ಷಣೆ ಕಾಯಿದೆ ಹೋರಾಟದ ಸಂದರ್ಭದಲ್ಲಿ ತುಟಿ ಬಿಚ್ಚದ
ಸುರೇಶಕುಮಾರ ಅವರು, ಮೈಸೂರಿನ ವಕೀಲರ ಕಾರ್ಯಕ್ರಮಕ್ಕೆ ಕಪ್ಪು ಮಸಿ ಬಳಿಯುವ ಸಾಹಸಕ್ಕೆ ಮುಂದಾಗಿದ್ದಾರೆ ಎಂದು ರಮೇಶಬಾಬು ದೂರಿದ್ದಾರೆ.
ಜೂನ್ 2012 ರಲ್ಲಿ ಅಂದು ಕಾನೂನು ಸಚಿವರಾಗಿದ್ದ ಸುರೇಶ ಕುಮಾರ್ ಅವರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ದಾರಿತಪ್ಪಿಸಿ ರಾಜ್ ಮಹಲ್ ವಿಲಾಸ್ ಬಡಾವಣೆಯಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ 4000 ಚದರ ಅಡಿ ನಿವೇಶನವನ್ನು ಮುಖ್ಯಮಂತ್ರಿಗಳ ವಿಶೇಷ ಹಂಚಿಕೆ ಅಡಿಯಲ್ಲಿ ಪಡೆದುಕೊಂಡಿದ್ದರು. ಇವರ ಕಾನೂನುಬಾಹಿರ ನಿವೇಶನ ಹಂಚಿಕೆ ಸಾರ್ವಜನಿಕ ಟೀಕೆಗೆ ಒಳಗಾದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ನಾಟಕವಾಡಿದರು. ತಮ್ಮ ನಿವೇಶನವನ್ನು ವಾಪಸ್ಸು ನೀಡಿ, ಸಚಿವರಾಗಿ ಮುಂದುವರೆದಿದ್ದರು. ಇವರಿಗೆ ಬೇರೆಯವರನ್ನು ಟೀಕಿಸುವ ಯಾವ ನೈತಿಕ ಶಕ್ತಿ ಇದೆ ? ಎಂದು ರಮೇಶಬಾಬು ಪ್ರಶ್ನಿಸಿದ್ದಾರೆ. ರಾಜ್ಯ ಹೈ ಕೋರ್ಟ ಇವರ ಪತ್ರವನ್ನು ನಿರ್ಲಕ್ಷ್ಯ ಮಾಡುವುದರ ಜೊತೆಗೆ ಮೈಸೂರಿನ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿ ವಕೀಲರ ಮತ್ತು ನ್ಯಾಯಾಂಗದ (ಬಾರ್ ಅಂಡ್ ಬೆಂಚ್) ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದು ರಮೇಶಬಾಬು ಅವರು ತಮ್ಮ ಪತ್ರದಲ್ಲಿ ವಿನಂತಿಸಿದ್ದಾರೆ.