ಚಾಮರಾಜನಗರ: ದೇಶದಲ್ಲಿ ಮತ್ತು ರಾಜ್ಯದಲ್ಲಿ ಅಧಿಕಾರವನ್ನು ಹಿಡಿಯುವುದೇ ಎಸ್‌ಡಿಪಿಐ ಪಕ್ಷದ ಏಕೈಕ ಗುರಿಯಾಗಿದೆ ಎಂದು ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ರಾರ್ ಅಹಮ್ಮದ್ ಹೇಳಿದರು.
ನಗರದ ಡಿವಿಯೇಷನ್ ರಸ್ತೆಯಲ್ಲಿರುವ ಜಿಲ್ಲಾ ಕಚೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಎಸ್‌ಡಿಪಿಐ ಪಕ್ಷದ 17ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಚಳುವಳಿ ರೂಪದ ರಾಜಕೀಯ ಬಹಳ ಕಷ್ಟದ ಮಾರ್ಗವಾಗಿದೆ. ಜನರ ನಡುವಿನಿಂದ ನಾಯಕತ್ವ ಪಕ್ವ ಮಾಡಿಕೊಂಡು ಜನರ ಪ್ರತಿ ಸಂಕಷ್ಟ ನೋವಿಗೆ ಸ್ಪಂದಿಸುತ್ತಾ, ಅವಶ್ಯಕತೆ ಬಿದ್ದಲ್ಲಿ ಬೀದಿಗಿಳಿದು ಹೋರಾಟ ಮಾಡುವುದು, ಜೀವವನ್ನೂ ಲೆಕ್ಕಿಸದೆ ಜನರ ರಕ್ಷಣೆ, ಸೇವೆಗೆ ನಿಲ್ಲುವುದು, ಅದರ ತೆಗೆ ರಾಜಕೀಯ ಅಧಿಕಾರ ಹಿಡಿಯುವ ಕನಸು ಹೊತ್ತಿರುವ ಏಕೈಕ ರಾಜಕೀಯ ಪಕ್ಷವೆಂದರೆ ಅದು ಎಸ್‌ಡಿಪಿಐ ಪಕ್ಷ ಎಂದು ಹೇಳಿದರು.
ಎಸ್‌ಡಿಪಿಐ ಪಕ್ಷ ಇಂದಿಗೆ 16 ವರ್ಷ ಪೂರೈಸಿ 17ನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಈ ಸಂದರ್ಭದಲ್ಲಿ ಈ ಪಕ್ಷದ ತತ್ವ ಸಿದ್ಧಾಂತಕ್ಕಾಗಿ ಶ್ರಮಿಸಿದ, ತ್ಯಾಗ ಮಾಡಿದ ಎಲ್ಲರನ್ನೂ ಸ್ಮರಿಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಜಿಲ್ಲಾಧ್ಯಕ್ಷ ಕಲೀಲ್ ಉಲ್ಲಾ ಮಾತನಾಡಿ, ರಾಜಕೀಯ ಸಿದ್ದಾಂತಗಳ ಕುರಿತು ತೀವ್ರ ನಿಷ್ಠೆ ಹೊಂದಿರುವ ಎಸ್‌ಡಿಪಿಐ ಪಕ್ಷದ ಚಳವಳಿಯ ಬಲವು ಕೇವಲ ವ್ಯಕ್ತಿಗಳ ತ್ಯಾಗದಲ್ಲಿ ಅಲ್ಲ, ಆ ವ್ಯಕ್ತಿಗಳ ಹಿಂದೆ ನಿಂತಿರುವ ಕುಟುಂಬಗಳ ಧೈರ್ಯ, ಸಹನೆ ಮತ್ತು ನೈತಿಕ ಬೆಂಬಲದಲ್ಲಿಯೂ ಇದೆ ಎಂದು ಹೇಳಿದರು. ಈ ವೇಳೆ ಪಕ್ಷದ ಕಾರ್ಯಕರ್ತರಿಂದ ರಕ್ತ ದಾನ ಶಿಬಿರ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಪಕ್ಷದ ಉಪಾಧ್ಯಕ್ಷ ಸಿ.ಕೆ.ನಯಾಜ್ ಉಲ್ಲಾ, ಪ್ರಧಾನ ಕಾರ್ಯದರ್ಶಿ ಎಂ. ಮಹೇಶ್, ನಸ್ರುಲ್ಲಾ, ಖಜಾಂಚಿ ಸೈಯದ್ ಇರ್ಫಾನ್, ಟೌನ್ ಅಧ್ಯಕ್ಷ ಮಜರ್ ಖಾನ್, ರಕ್ತನಿಧಿ ಘಟಕದ ರವಿಕುಮಾರ್ ಹಾಗೂ ಇತರರು ಹಾಜರಿದ್ದರು.