ರಾಜಕಾರಣಿಗಳಿಗೆ ಬೇಕು ನಿಸ್ವಾರ್ಥ ಗುಣ: ತೋಂಟದ ಸಿದ್ದರಾಮ ಶ್ರೀ
Published on:
Copied
Follow Us
ದಾವಣಗೆರೆ :ಮಾಗನೂರು ಬಸಪ್ಪ ಅವರಲ್ಲಿ ನಿಸ್ವಾರ್ಥ, ನಿರಪೇಕ್ಷ ಗುಣವಿತ್ತು. ಸಂಘ-ಸಂಸ್ಥೆಯ ಹಣ ಮನೆಗೆ ಬಳಸದಂತೆಯೂ ಪ್ರತಿಪಾದಿಸಿದ್ದರು. ಇದು ಇಂದಿನ ರಾಜಕಾರಣಿಗಳಿಗೆ ಅಗತ್ಯವಿದೆ ಎಂದು ಗದಗ ತೋಂಟದಾರ್ಯ ಮಠದ ಡಾ. ಶ್ರೀ ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.
ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನ ಸಹಯೋಗದಲ್ಲಿ ನೀಡಲಾದ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿ ಸ್ವೀಕರಿಸಿ, ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬಸವಣ್ಣನವರು ಕೂಡ ಬಿಜ್ಜಳನ ಮಂತ್ರಿಯಾಗಿ ರಾಜಕಾರಣ ಮಾಡಿದ್ದರು. ತನ್ನದಲ್ಲದ ಹಣ ಮುಟ್ಟದಂತೆ ಕಾಯಕವನ್ನು ನಿರ್ವಹಿಸಿದ್ದರು ಎಂದರು. ಪ್ರಶಸ್ತಿಯ 50 ಸಾವಿರ ರೂ. ಮೊತ್ತವನ್ನು ದಾವಿವಿಯಲ್ಲಿ ನಿರ್ಮಾಣ ಉದ್ದೇಶಿತ ಶರಣ ಸಂಸ್ಕೃತಿ ಅಧ್ಯಯನ ಕೇಂದ್ರಕ್ಕೆ ನೀಡುವುದಾಗಿ ಘೋಷಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ, ಕಸಾಪ ಜಿಲ್ಲಾಧ್ಯಕ್ಷರ ಮನವಿಯಂತೆ ದಾವಣಗೆರೆಯಲ್ಲೇ ಮುಂದಿನ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಸಂಬಂಧ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ್, ದಾವಣಗೆರೆ ವಿವಿ ಕುಲಪತಿ ಪ್ರೊ. ಬಸವರಾಜ ಡಿ. ಕುಂಬಾರ್, ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ.ಸಂಗಮೇಶಗೌಡ್ರು, ಪತ್ನಿ ಸುನಂದಾ ದೇವಿ, ಡಾ.ಮಂಜುನಾಥ ಕುರ್ಕಿ ಇದ್ದರು.