

ಮೈಸೂರು: ಜನಪ್ರತಿನಿಧಿಗಳಿಗೆ ವಿದ್ಯಾರ್ಹತೆ ಏಕಿಲ್ಲ? ರಾಜಕಾರಣಿಗಳಿಗೆ ನಿವೃತ್ತಿ ಏಕಿಲ್ಲ? ರಾಜಕಾರಣಿಗಳಿಗೆ ಮಂಪರು ಪರೀಕ್ಷೆ ಮಾಡಿಸಬೇಕು…
ಜಿಲ್ಲಾಡಳಿತ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಕಲಾಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ವಿದ್ಯಾರ್ಥಿಗಳಿಂದ ತೂರಿಬಂದ ಪ್ರಶ್ನೆಗಳಿವು.
ರಾಜಕಾರಣಿಗಳ ಚಾರಿತ್ರ್ಯ ಮತ್ತು ಹಿನ್ನೆಲೆ ತಿಳಿಯಲು ಚುನಾವಣೆಗೂ ಮುನ್ನ ಮಂಪರು ಪರೀಕ್ಷೆ ಮಾಡಿಸಬಹುದಲ್ಲವೇ ಎಂದು ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಸಂದೀಪ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಗೇರಿ, ಇಂತಹ ಪ್ರಶ್ನೆ ಕೇಳಿದ್ದು ಮೈಸೂರಿನಲ್ಲೇ ಮೊದಲು. ಇದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಈ ಕುರಿತು ಚರ್ಚಿಸಲಾಗುವುದು ಎಂದು ಚುಟುಕಾಗಿ ಉತ್ತರಿಸಿದರು.
ಬೇರೆ ಕ್ಷೇತ್ರಗಳಿಗೆ ವಿದ್ಯಾರ್ಹತೆ ಇರುವಂತೆ ರಾಜಕಾರಣಿಗಳಿಗೂ ಏಕೆ ವಿದ್ಯಾರ್ಹತೆ ಇರಬಾರದು ಎಂದು ಬಾಸುದೇವ ಸೋಮಾನಿ ಕಾಲೇಜಿನ ವಿದ್ಯಾರ್ಥಿನಿ ನವ್ಯಾ ಪ್ರಶ್ನಿಸಿದರು. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಸ್ಪೀಕರ್, ಶಿಕ್ಷಣದಿಂದ ಮಾತ್ರವೇ ಸಾಧನೆ ಸಾಧ್ಯ ಎಂಬುದನ್ನು ನಾನು ಒಪ್ಪುವುದಿಲ್ಲ. ಸಾಲುಮರದ ತಿಮ್ಮಕ್ಕನ ಸಾಧನೆ ಮಾಡಲು ವಿದ್ಯಾವಂತರಿಗೆ ಸಾಧ್ಯವೇ? ಡಿ.ದೇವರಾಜ ಅರಸು ಅವರು ಭೂಸುಧಾರಣಾ ಕಾಯ್ದೆ ತರಲು ಪಿಎಚ್.ಡಿ ಮಾಡಿದ್ದರೇ? ಡಾ.ರಾಜ್‌ಕುಮಾರ್ ಯಾವ ಪದವಿ ಪಡೆದಿದ್ದರು? ಶಿಕ್ಷಣಕ್ಕಿಂತ ಜೀವನಾನುಭವ ಮುಖ್ಯ. ಜತೆಗೆ ಶಿಕ್ಷಣವೂ ಬೇಕು ಎಂದು ಹೇಳಿದರು.
ಚುನಾವಣೆಗೆ ಸ್ಪರ್ಧಿಸಲು ರಾಜಕೀಯ ಪಕ್ಷಗಳು ಟಿಕೆಟ್ ಕೊಡುವಾಗ ಆತನ ಹಿನ್ನೆಲೆ ತಿಳಿದು ಉತ್ತಮರಿಗೆ ಟಿಕೆಟ್ ಕೊಡಲು ಸಾಧ್ಯವಿಲ್ಲವೇ? ಲಂಚಾವತಾರಕ್ಕೆ ಕಡಿವಾಣ ಹಾಕಲು ಆಗುವುದಿಲ್ಲವೇ? ಎಂದು ಜೆಎಸ್‌ಎಸ್ ಕಾನೂನು ಕಾಲೇಜಿನ ಬೆಳ್ಳಿಯಪ್ಪ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕಾಗೇರಿ, ಭ್ರಷ್ಟಾಚಾರ ವಿಷವರ್ತುಲವಾಗಿ ಎಲ್ಲರ ಮಾನಸಿಕ ಸ್ಥಿತಿಯಾಗಿದೆ. ಇದನ್ನು ಒಬ್ಬರಿಂದ ತಡೆಯಲು ಸಾಧ್ಯವಿಲ್ಲ, ಎಲ್ಲರೂ ಕೈ ಜೋಡಿಸಬೇಕು ಎಂದರು.
ಮಹಿಳೆಯರಿಗೆ ವಿಧಾನಸಭೆ, ಲೋಕಸಭೆಗೆ ಪ್ರಾತಿನಿಧ್ಯ ಏಕೆ ನೀಡಿಲ್ಲ ಎಂದು ಬಾಸುದೇವ ಸೋಮಾನಿ ಕಾಲೇಜಿನ ವಿದ್ಯಾರ್ಥಿನಿ ಖುಷಿ ನಾರಾಯಣದಾಸ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕಾಗೇರಿ, ಮಹಿಳೆಯರಿಗೆ ಚುನಾವಣೆಯಲ್ಲಿ ಮೀಸಲಾತಿ ಹೆಚ್ಚಿಸಲು ಹಲವು ವರ್ಷಗಳಿಂದ ಪ್ರಯತ್ನಿಸಲಾಗುತ್ತಿದೆ. ಆದರೆ, ಒಟ್ಟಾಭಿಪ್ರಾಯ ರೂಪಿತವಾಗದಿರುವುದರಿಂದ ವಿಳಂಬವಾಗುತ್ತಿದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಗಮನಹರಿಸಲಾಗುವುದು ಎಂದು ತಿಳಿಸಿದರು.
ಜೈಲಿನಲ್ಲಿರುವ ಕೈದಿಗಳಿಗೂ ಮತದಾನದ ಹಕ್ಕು ನೀಡಬಾರದೇಕೆ? ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ನೀಡುವ ಆಶ್ವಾಸನೆಯನ್ನು ಅಗ್ರಿಮೆಂಟ್ ಮಾಡಿಕೊಡಬಾರದೇಕೆ? ರಾಜಕಾರಣಿಗಳಿಗೆ ನಿವೃತ್ತಿ ಏಕಿಲ್ಲ? ವ್ಯವಸ್ಥೆ ಭ್ರಷ್ಟವಾಗಿದೆ ಎಂದು ದೂರುವ ರಾಜಕಾರಣಿಗಳು ಚುನಾವಣೆಗೆ ಏಕೆ ನಿಲ್ಲುತ್ತೀರಿ ಎಂಬ ಪ್ರಶ್ನೆಗಳು, ನೀತಿ ಸಂಹಿತೆ ಜಾರಿಯಾದಾಗಿನಿಂದಲೇ ಬಾರ್‌ಗಳನ್ನು ಮುಚ್ಚಿಸಿ ಎಂಬಿತ್ಯಾದಿ ಸಲಹೆಗಳು ಕೇಳಿಬಂದವು.
ಶಾಸಕರಾದ ಎಲ್.ನಾಗೇಂದ್ರ, ತನ್ವೀರ್ ಸೇಠ್, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪಾ, ಮೈಲ್ಯಾಕ್ ಅಧ್ಯಕ್ಷ ಕೌಟಿಲ್ಯ ರಘು, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಇತರರಿದ್ದರು.
ಹಣ, ಹೆಂಡದ ಮೇಲೆ ಚುನಾವಣೆ
ಹಣ, ಹೆಂಡದ ಮೇಲೆ ಚುನಾವಣೆಗಳು ನಡೆಯುತ್ತಿವೆ. ಇದಕ್ಕೆ ಸಂವಿಧಾನಬದ್ಧ ಸಂಸ್ಥೆಗಳು ಹಾಗೂ ಜನರು ಕಾರಣರಾಗಿದ್ದಾರೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಳವಳ ವ್ಯಕ್ತಪಡಿಸಿದರು.
ಕಲಾಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇವಲ ಹಣ ಗಳಿಕೆಯ ಏಕಮೇವ ಉದ್ದೇಶದಿಂದ ಸಮಾಜದ ವವಸ್ಥೆಯನ್ನು ಹಾಳು ಮಾಡಲಾಗುತ್ತಿದೆ. ರಾಜಕಾರಣಿಗಳ ಇಂದಿನ ಮನಸ್ಥಿಗೆ ಮತದಾರರೇ ಕಾರಣ. ರಾಜಕಾರಣಿಗಳು ಮತ ಕೇಳಲು ಬಂದಾಗ ಮೂಲ ಸೌಕರ್ಯಗಳನ್ನು ಕೇಳುವ ಬದಲು, ಆಸೆ ಆಮಿಷಗಳಿಗೆ ಒಳಗಾಗುತ್ತೀರಿ. ಕಾರ್ಯಾಂಗದಲ್ಲಿ ಇರುವ ಜಟಿಲತೆ ಹಾಗೂ ಅಧಿಕಾರಿಗಳ ಕಾರ್ಯವೈಖರಿಯಿಂದ ಜನರು ತತ್ತರಿಸುತ್ತಿದ್ದಾರೆ. ಸರ್ಕಾರದ 3 ಅಂಗಗಳಲ್ಲಿಯೂ ಲೋಪಗಳು ಕಂಡುಬರುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯುವಜನರು ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲುಗಾರರಾಗಬೇಕು. ಪ್ರತಿಯೊಬ್ಬ ಮತದಾರರು ‘ನನ್ನ ಮತ ಮಾರಾಟಕ್ಕೆ ಇಲ್ಲ’ ಎಂಬ ತತ್ವಕ್ಕೆ ಅನುಗುಣವಾಗಿ ಮತ ಚಲಾಯಿಸಬೇಕು. ಆಗ ಮಾತ್ರ ಚುನಾವಣೆ ವ್ಯವಸ್ಥೆಯನ್ನು ಸುಧಾರಣೆ ಮಾಡಲು ಸಾಧ್ಯ ಎಂದರು.
ಮತದಾರರು ಮತವನ್ನು ಮಾರಾಟಕ್ಕೆ ಇಡಬೇಡಿ. ಉತ್ತಮ ಅಭ್ಯರ್ಥಿಗಳಿಗೆ ತಮ್ಮ ಅಮೂಲ್ಯ ಮತವನ್ನು ಚಲಾವಣೆ ಮಾಡಿ. ನಿರಂತರವಾಗಿ ಚುನಾವಣೆ ವ್ಯವಸ್ಥೆ ಸುಧಾರಣೆ ಮಾಡಬೇಕು. ಚುನಾವಣಾ ಆಯೋಗದ ಜವಾಬ್ದಾರಿ ಹೆಚ್ಚಿದೆ ಎಂದರು.