

ಮೈಸೂರು: ಹನಿಟ್ರ್ಯಾಪ್‌ನಂತಹ ವಿಚಾರವು ರಾಜಕಾರಣದ ವಿಚಾರವಾಗಿ ಚರ್ಚೆ ಆಗುತ್ತಿರುವುದು ದುರಂತ ಎಂದು ಶಾಸಕ ತನ್ವೀರ್ ಸೇಠ್ ಬೇಸರವ್ಯಕ್ತಪಡಿಸಿದರು.
135 ಸ್ಥಾನ ಪಡೆದ ನಾವು ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಬೇಕು. ಅದನ್ನು ಬಿಟ್ಟು ಈ ರೀತಿ ಚರ್ಚೆ ಸರಿಯಲ್ಲ. ಹನಿಟ್ರ್ಯಾಪ್ ವಿಚಾರದಲ್ಲಿ ಯಾರೋ ಕರೆ ಮಾಡುತ್ತಾರೆ, ಯಾರೋ ಕರೆ ರಿಸೀವ್ ಮಾಡುತ್ತಾರೆ.
ಅದನ್ನು ಮುಂದುವರಿಸಬೇಕಾ? ಬೇಡವಾ? ಎನ್ನೋದು ಅವರ ವೈಯಕ್ತಿಕ ವಿಚಾರ. ಇದು ವೈಯಕ್ತಿಕ ವಿಚಾರ, ಸಾರ್ವಜನಿಕರಿಗೂ ಅದಕ್ಕೂ ಸಂಬಂಧ ಇಲ್ಲ. ಈ ಹಿನ್ನೆಲೆಯಲ್ಲಿ ಈ ವಿಚಾರ ಸದನದಲ್ಲಿ ಚರ್ಚೆ ಆಗಬಾರದಿತ್ತು ಎಂದು ನಗರದಲ್ಲಿ ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಹನಿಟ್ರ್ಯಾಪ್ ವಿಚಾರವನ್ನು ಮುಂದುವರಿಸಿಕೊಂಡು ಹೋಗೋದು, ಬಿಡುವುದು ಅವರ ಇಚ್ಛೆಗೆ ಬಿಟ್ಟಿದ್ದು. ಇದು ಸದನದಲ್ಲಿ ಏಕೆ ಚರ್ಚೆಗೆ ಬಂತು ಅಂತ ಹೇಳಲ್ಲ. ಇದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಇಚ್ಛೆ ಪಡೋದಿಲ್ಲ. ತನಿಖೆ ಆಗಬೇಕು, ಆಗಬಾರದು ಎಂದು ಹೇಳಲಿಕ್ಕೂ ಹೋಗಲ್ಲ. ಯಾವ ಉದ್ದೇಶದಿಂದ ಚುನಾಯಿತ ಪ್ರತಿನಿಧಿಗಳು ಇರಬೇಕೋ ಆ ಉದ್ದೇಶದಿಂದ ಇರಬೇಕು. ಪ್ರಸಕ್ತ ಬೆಳವಣಿಗೆ ಕಂಡು ಬೇಸರವಾಗಿದೆ ಎಂದು ಹೇಳಿದರು.
ಸ್ಪಷ್ಟ ಬಹುಮತದಿಂದ ಆಯ್ಕೆಯಾದ ಸರ್ಕಾರ ಒಂದೊಳ್ಳೆಯ ಆಡಳಿತ ಕೊಡಬೇಕು. ವೈಯಕ್ತಿಕ ವಿಚಾರಗಳನ್ನು ರಾಜಕೀಯದಲ್ಲಿ ತಂದಿದ್ದು ದುರಂತ. ವೈಯಕ್ತಿಕ ವಿಚಾರ, ಜಾತಿ ವಿಚಾರ, ಪ್ರಾಂತ್ಯ ವಿಚಾರಗಳನ್ನು ರಾಜಕೀಯದಲ್ಲಿ ತರಬಾರದು ಎಂದು ಹೇಳಿದರು.
ಸತೀಶ್ ಜಾರಕಿಹೊಳಿ ಅವರು ಎಚ್.ಡಿ.ಕುಮಾರಸ್ವಾಮಿ ಭೇಟಿ ಕುರಿತು ಪ್ರತಿಕ್ರಿಯಿಸಿ, ರಾಜಕಾರಣದಲ್ಲಿ ಯಾರೂ, ಯಾರನ್ನಾದರೂ ಭೇಟಿ ಆಗಬಹುದು. ರಾಜ್ಯ ಸಚಿವರು ಕೇಂದ್ರ ಸಚಿವರನ್ನು ಭೇಟಿ ಮಾಡುವ ಅನಿವಾರ್ಯತೆ ಇರುತ್ತದೆ.
ಈ ವಿಚಾರಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಜೆಡಿಎಸ್ ಬೆಂಬಲ ವಿಚಾರ. 140 ಸಂಖ್ಯಾಬಲದ ಮುಂದೆ 19 ಜನರು ಏನೂ ಮಾಡಲಿಕ್ಕೆ ಆಗುವುದಿಲ್ಲ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.