ರಾಜಕಾರಣ ಬಿಟ್ಟು ಕೆನಾಲ್​ ಹೋರಾಟಕ್ಕೆ ಬನ್ನಿ

09 1
Published on

ಕಾಮಗಾರಿ ತಡೆಗಾಗಿ ರಕ್ತಪಾತ, ಪ್ರಾಣ ತ್ಯಾಗಕ್ಕೂ ಸಿದ್ಧ, ಎರಡು ದಿನಗಳ ಪಾದಯಾತ್ರೆ ಸಂಪನ್ನ,  ಅಧಿವೇಶನದಲ್ಲಿ ಪ್ರತಿಭಟನೆ

ತುಮಕೂರು: ರಾಮನಗರ ಜಿಲ್ಲೆಗೆ ಗುಬ್ಬಿ ತಾಲೂಕು ಕಡಬದಿಂದ ನೇರವಾಗಿ ಎಕ್ಸ್​ಪ್ರೆಸ್​ ಕೆನಾಲ್​ ಮೂಲಕ ಹೇಮಾವತಿ ನೀರು ತೆಗೆದುಕೊಂಡು ಹೋಗಲು ಆರಂಭಿಸಿರುವ ಕಾಮಗಾರಿ ವಿರೋಧಿಸಿ ಬಿಜೆಪಿ, ಜೆಡಿಎಸ್​ ನೇತೃತ್ವದಲ್ಲಿ ಎರಡು ದಿನ ಆಯೋಜಿಸಿದ್ದ ಪಾದಯಾತ್ರೆ ಭಾನುವಾರ ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಂಪನ್ನವಾಯಿತು.

ಜನಪರವಾಗಿ ಆರಂಭವಾಗಿದ್ದ ಪಾದಯಾತ್ರೆ ಸಾಗಿಬಂದ ಮಾರ್ಗಮಧ್ಯೆ ಸಿದ್ಧಾರ್ಥನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಮನೆಗೆ ಮುತ್ತಿಗೆ ಹಾಕಲು ಪ್ರತಿಭಟನಾನಿರತರು ಮುಂದಾಗಿದ್ದು, ಪ್ರತಿಭಟನೆ ರಾಜಕೀಯ ಸ್ವರೂಪ ಪಡೆದುಕೊಂಡಿತು. ಗೃಹಸಚಿವರ ಮನೆಗೆ ಜನರು ನುಗ್ಗಿದ್ದರಿಂದ ಗಲಿಬಿಲಿಯಾದ ಪೊಲೀಸರು ಮುಖಂಡರ ಮನವೊಲಿಸಿ ಪಾದಯಾತ್ರೆಯನ್ನು ಸರಿದಾರಿಗೆ ತಂದು ನಿಟ್ಟುಸಿರುಬಿಟ್ಟರು.

ತುಮಕೂರಿನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಬಿ.ಸುರೇಶ್​ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರು ಡಿಸಿಎಂ ಡಿ.ಕೆ.ಶಿವಕುಮಾರ್​ ಅವರಿಗೆ ಹೆದರಿಕೊಂಡು ಜಿಲ್ಲೆಯ ರೈತರ ಪಾಲಿಗೆ ಮರಣ ಶಾಸನವಾಗಲಿರುವ ಯೋಜನೆಗೆ ಸಹಕಾರ ನೀಡಿದ್ದಾರೆ. ಜಿಲ್ಲೆಯ ಜನರ ಹಿತಬಲಿಕೊಟ್ಟು ರಾಜಕಾರಣ ಮಾಡದೆ ಕೂಡಲೇ ಸ್ಥಾನಕ್ಕೆ ರಾಜೀನಾಮೆ ನೀಡಿ ನಮ್ಮ ಹೋರಾಟಕ್ಕೆ ಪರಮೇಶ್ವರ ಕೈಜೋಡಿಸಬೇಕು ಎಂದು ಆಗ್ರಹಿಸಿದರು.

ಯಾವುದೇ ಕಾರಣಕ್ಕೂ ಪೈಪ್​ಲೈನ್​ ಮೂಲಕ ಹೇಮಾವತಿ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ, ನಮ್ಮ ಹೆಣದ ಮೇಲೆ ನೀರು ತೆಗೆದುಕೊಂಡು ಹೋಗಬೇಕಷ್ಟೇ. ಒಂದು ವೇಳೆ ಈ ಯೋಜನೆ ಜಾರಿಯಾದರೆ ರಕ್ತಪಾತ, ಪ್ರಾಣ ತ್ಯಾಗಕ್ಕೂ ಸಿದ್ಧ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​ ಪ್ರತಿಷ್ಠೆಯಿಂದ ಜಿಲ್ಲೆಯ ಜನರಿಗೆ ವಿಷ ಉಣಿಸಿ ಈ ಯೋಜನೆ ಜಾರಿ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್​ ಮಾತನಾಡಿ, ಜಿಲ್ಲೆಯ ರೈತರ, ನಾಗರಿಕರ ನೀರಿನ ಹಕ್ಕಿಗಾಗಿ ಈ ಪಾದಯಾತ್ರೆ ನಡೆದಿದೆ. ರೈತರು, ಸಂಘಸಂಸ್ಥೆಗಳವರು, ಮಿತ್ರ ಪಕ್ಷದವರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಕುಣಿಗಲ್​ಗೆ ಹೇಮಾವತಿ ನೀರು ನೀಡುವ ವಿಚಾರದಲ್ಲಿ ನಮ್ಮ ತಕರಾರಿಲ್ಲ, ಹಾಲಿ ಇರುವ ನಾಲೆಯ ಮೂಲಕ ನೀರನ್ನು ತೆಗೆದುಕೊಂಡು ಹೋಗಲಿ, ಆದರೆ ಬಸ್​ ಹೋಗುವ ಗಾತ್ರದ ಪೈಪ್​ ಬಳಸಿಕೊಂಡು ನೀರನ್ನು ತೆಗೆದುಕೊಂಡು ಹೋಗುವುದಕ್ಕೆ ಅವಕಾಶ ನೀಡುವುದಿಲ್ಲ ಎಂದರು. ಬೆಳ್ಳಾವಿ ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರ ಸ್ವಾಮೀಜಿ, ಶಾಸಕರಾದ ಎಂ.ಟಿ.ಕೃಷ್ಣಪ್ಪ, ಸಿ.ಬಿ.ಸುರೇಶ್​ ಬಾಬು, ವಿಧಾನ ಪರಿಷತ್​ ಸದಸ್ಯ ಚಿದಾನಂದಗೌಡ, ಮಾಜಿ ಸಚಿವ ಸೊಗಡು ಶಿವಣ್ಣ, ಜೆಡಿಎಸ್​ ಜಿಲ್ಲಾಧ್ಯಕ್ಷ ಆರ್​.ಸಿ.ಆಂಜನಪ್ಪ, ಕಾರ್ಯಾಧ್ಯಕ್ಷ ನಾಗರಾಜು ಮತ್ತಿತರರು ಪಾದಯಾತ್ರೆ ನೇತೃತ್ವ ವಹಿಸಿದ್ದರು.

ಆರೋಪ ಸಾಬೀತು ಮಾಡಿದ್ರೆ ರಾಜಕೀಯ ನಿವೃತ್ತಿ:ಪಾದಯಾತ್ರೆ ನೇತೃತ್ವ ವಹಿಸಿದ್ದ ಬಿಜೆಪಿ ಶಾಸಕ ಬಿ.ಸುರೇಶ್​ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್​ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸುವ ಮೂಲಕ ಹೋರಾಟವನ್ನು ರಾಜಕೀಯಗೊಳಿಸಿದರು. ಪರಮೇಶ್ವರ ಸಿಎಂ ಅಗಬೇಕು ಎಂದು ಆಸೆ ಇಟ್ಟುಕೊಂಡು ಕಾಂಗ್ರೆಸ್​ ಮುಖಂಡರ ವಿರುದ್ಧ ಮಾತನಾಡುವ ಧೈರ್ಯ ಮಾಡುತ್ತಿಲ್ಲ. ಹಣೆಯ ಬರಹದಲ್ಲಿ ಬರೆದಿದ್ದರೆ ಸಿಎಂ ಆಗುತ್ತೀರ, ಮೊದಲು ರಾಜೀನಾಮೆ ಕೊಟ್ಟು ಸರ್ಕಾರದಿಂದ ಹೊರಬಂದು ಹೋರಾಟದಲ್ಲಿ ಭಾಗವಹಿಸಿ, ಜನರು ನಿಮ್ಮನ್ನು ಒಪು$್ಪತ್ತಾರೆ ಎಂದು ಸಲಹೆ ನೀಡಿದರು. ಜಿಲ್ಲೆಯ ಜನರ ಹಿತಕ್ಕಾಗಿ ನಾವು ನಡೆಸುತ್ತಿರುವ ಹೋರಾಟದ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್​ ದುರಹಂಕಾರದಿಂದ ಮಾತನಾಡಿದ್ದಾರೆ. ನಾವು ಕೂಡ ಅವರಿಗೆ ಅಂಥದ್ದೇ ಭಾಷೆಯಲ್ಲಿ ಪ್ರತ್ಯುತ್ತರ ನೀಡಬಹುದು, ಕಳ್ಳತನ ಮಾಡಿ, ಅಕ್ರಮವೆಸಗಿ ತಿಹಾರ್​ ಜೈಲಿಗೆ ಹೋಗಿದ್ದರು ಎಂದು ಹೇಳೋಕೆ ಆಗುತ್ತಾ ಎಂದು ಮೂದಲಿಸಿದರು. ಜಿಲ್ಲೆಯ ಬಿಜೆಪಿ, ಜೆಡಿಎಸ್​ನ ನಾಲ್ಕು ಶಾಸಕರ ವಿರುದ್ಧ ಶಿವಕುಮಾರ್​ ಮಾಡಿರುವ ಆರೋಪ ಸಾಬೀತುಪಡಿಸಿದರೆ ನಾವೆಲ್ಲರೂ ರಾಜಕೀಯ ನಿವೃತ್ತಿ ಪಡೆಯುತ್ತೇವೆ. ಕುಣಿಗಲ್​ಗೆ ನೀರು ತೆಗೆದುಕೊಂಡು ಹೋಗಲು ನಮ್ಮ ಅಭ್ಯಂತರವಿಲ್ಲ, ರಾಮನಗರಕ್ಕೆ ತೆಗೆದುಕೊಂಡು ಹೋಗಲು ನಾವು ಬಿಡುವುದಿಲ್ಲ ಎಂದು ಹರಿಹಾಯ್ದರು.

ಜಿಲ್ಲೆಯ ಜನರಿಗೆ ಅನ್ಯಾಯವಾಗುತ್ತಿದ್ದರೂ ಮಾತನಾಡದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಪರಮೇಶ್ವರ ಅವರು ಕೂಡಲೇ ಮಂತ್ರಿಸ್ಥಾನಕ್ಕೆ ರಾಜೀನಾಮೆ ಕೊಟ್ಟು ಜನರಿಗೆ ನ್ಯಾಯ ನೀಡಲು ಬನ್ನಿ, ಇಲ್ಲವಾದರೆ ಅವರ ಮನೆ ಮುಂದೆ ಹೋರಾಟ ಮಾಡುತ್ತೇವೆ. ಜಿಲ್ಲೆಯಲ್ಲಿರುವ 7 ಕಾಂಗ್ರೆಸ್​ ಶಾಸಕರು ಜಿಲ್ಲೆಯ ಜನರೊಂದಿಗೆ ಹೋರಾಟಕ್ಕೆ ಬರಬೇಕು. ಬೆಳಗಾವಿ ಅಧಿವೇಶನದಲ್ಲಿಯೂ ಎನ್​ಡಿಎ ಶಾಸಕರು ಯೋಜನೆಯನ್ನು ವಿರೋಧಿಸಿ ಉಗ್ರವಾದ ಹೋರಾಟ ಮಾಡುತ್ತೇವೆ.

| ಬಿ.ಸುರೇಶ್​ಗೌಡ ಬಿಜೆಪಿ ಶಾಸಕ

ಯಾವುದೇ ಕಾರಣಕ್ಕೂ ಎಕ್ಸ್​ ಪ್ರೆಸ್​ ಕೆನಾಲ್​ ಮೂಲಕ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಈಗಿರುವ ನಾಲೆಯ ಮೂಲಕ ಕುಣಿಗಲ್​ಗೆ

ನೀರು ಹರಿಸಲಿ. ಎಕ್ಸ್​ಪ್ರೆಸ್​ ಕೆನಾಲ್​ ವಿರುದ್ಧ ಹೋರಾಟ ತೀವ್ರಗೊಳ್ಳಲಿದೆ. ಸೋಮವಾರದಿಂದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬಿಜೆಪಿ, ಜೆಡಿಎಸ್​ ಮುಖಂಡರು, ಮಠಾಧೀಶರು, ರೈತರು, ಸಂಘಟನೆಗಳು ಪ್ರಮುಖರು ಅರ್ನಿಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಿದ್ದೇವೆ.

| ಎಚ್​.ಎಸ್​.ರವಿ ಹೆಬ್ಬಾಕ, ಬಿಜೆಪಿ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net