ರಾಜಕಾರಣ, ಧರ್ಮದ ಅಪವಿತ್ರ ಮೈತ್ರಿ: ಡಾ.ಭೈರಮಂಗಲ ರಾಮೇಗೌಡ ಕಳವಳ

26
Published on

ಮೈಸೂರು: ರಾಜಕಾರಣ ಮತ್ತು ಧರ್ಮದ ಅಪವಿತ್ರ ಮೈತ್ರಿಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕೊಂಡಿದ್ದಾರೆ ಎಂದು ಬೆಂಗಳೂರಿನ ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷ ಡಾ.ಭೈರಮಂಗಲ ರಾಮೇಗೌಡ ಕಳವಳ ವ್ಯಕ್ತಪಡಿಸಿದರು.

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಜೈನ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕೇಂದ್ರದ ವತಿಯಿಂದ ನಗರದ ಎಸ್‌ಡಿಎಂ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ‘ಜೈನ ಧರ್ಮ: ಸಮಾಜಮುಖಿ ಚಿಂತನೆಗಳ’ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪದಲ್ಲಿ ಸಮಾರೋಪ ಭಾಷಣ ಮಾಡಿದರು.

ಈ ಅಪವಿತ್ರ ಮೈತ್ರಿ ಪ್ರಸಕ್ತ ಸಮಾಜದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ತಮ್ಮ ಪಾಡಿಗೆ ಕೆಲಸವನ್ನು ಮಾಡಿಕೊಂಡು ಹೋಗುವುದನ್ನು ಬಿಟ್ಟು ಇವು ಪರಸ್ಪರ ಒಡಂಬಡಿಕೆಯಂತೆ ಕಾರ್ಯನಿರ್ವಹಿಸುತ್ತಿವೆ. ಮತಕ್ಕಾಗಿ ರಾಜಕಾರಣವು ಧರ್ಮಕ್ಕೆ ಶರಣಾಗಿದ್ದರೆ, ಸ್ವಯಂ ಮೆರೆಯಲು ಧರ್ಮವು ರಾಜಕಾರಣಕ್ಕೆ ಬೆಂಬಲವಾಗಿ ನಿಂತಿದೆ. ಈ ಎರಡರ ನಡುವೆ ಸಿಲುಕಿರುವ ಜನರ ನೋವು-ಕಷ್ಟವನ್ನು ಕೇಳುವವರಿಲ್ಲದಂತಾಗಿದೆ ಎಂದರು.

ಅಚ್ಛೇ ದಿನ ಬರಲಿದೆ ಎಂದು ಹುಸಿ ಆಶ್ವಾಸನೆ ಕೊಟ್ಟರು. ಅಧಿಕಾರಕ್ಕೆ ಬಂದ ಬಳಿಕ ಮರೆತರು. ಈಗಲೂ ಜನರ ನಿರೀಕ್ಷೆಗಳು ಈಡೇರಲಿಲ್ಲ. ಇದಕ್ಕೆ ಉತ್ತರ ಕೊಡಲಾಗದೆ ಆಳುವವರು ತಪ್ಪಿಸಿಕೊಂಡು ತಿರುಗಾಡುತ್ತಿದ್ದಾರೆ. ಮತಕ್ಕಾಗಿ ಆದರ್ಶ ಮಾತುಗಳನ್ನು ಹೇಳಿಕೊಂಡು ಮೆರೆದಾಡುತ್ತಿದ್ದಾರೆ. ಈ ಮೂಲಕ ಜನರನ್ನು ವಂಚಿಸಲಾಗಿದೆ ಎಂದು ಕಿಡಿಕಾರಿದರು.

ತಲ್ಲಣ ಮತ್ತು ಕ್ಷೋಭೆಯಿಂದ ಸಮಾಜ ನಲುಗಿದೆ. ದೇಶ, ಜನರಿಗೆ ತೊಂದರೆಗಳು ಬಾಧಿಸುತ್ತಿವೆ. ಸಮಸ್ಯೆಗಳು ಕಿತ್ತು ತಿನ್ನುತ್ತಿವೆ. ದುರಾಡಳಿತವನ್ನು ಪ್ರಶ್ನಿಸಬೇಕಾದವರು ಮೌನವಾಗುವ ಮೂಲಕ ಅಸಹಾಯಕರಾಗಿದ್ದಾರೆ ಎಂದರು.

ಹಾಲಿ ಬಿಕ್ಕಟ್ಟಿನ ಕುರಿತು ಕವಿಗಳು, ಸಾಹಿತಿಗಳು, ಬುದ್ಧಿಜೀವಿಗಳು, ಪ್ರಜ್ಞಾವಂತರು ಮಾತನಾಡುತ್ತಿಲ್ಲ. ಸರ್ಕಾರದ ನೀತಿ-ನಿರ್ಧಾರಗಳನ್ನು ಪ್ರಶ್ನಿಸುವವರನ್ನು ಬಲವಂತವಾಗಿ ಬಾಯಿಮುಚ್ಚಿಸಲಾಗುತ್ತಿದೆ. ಟೀಕೆ-ವಿಮರ್ಶೆ ಮಾಡುವವರನ್ನೇ ಅಪರಾಧಿಗಳಾಗಿ ಮಾಡಲಾಗುತ್ತಿದೆ. ಜೈಲಿಗೆ ಹಾಕುತ್ತಾರೆ. ಇಲ್ಲವೇ ಪೊಲೀಸ್ ಠಾಣೆಗೆ ಅಲೆಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭ್ರಷ್ಟವಾಗಿರುವ ಧರ್ಮ ಮತ್ತು ರಾಜಕಾರಣವನ್ನು ರಿಪೇರಿ ಮಾಡುವ, ಬುದ್ಧಿಹೇಳುವ, ಕಿವಿಹಿಂಡುವ ಕೆಲಸವನ್ನು ಬರವಣಿಗೆ ಮೂಲಕ ಮಾಡಬೇಕಿದೆ ಎಂದರು.

ರಾಜಪ್ರಭುತ್ವದಂತೆ ಪ್ರಜಾಪ್ರಭುತ್ವದಲ್ಲೂ ದಬ್ಬಾಳಿಕೆ, ಶೋಷಣೆ ಮುಂದುವರಿದಿದೆ. ಇದನ್ನು ಪ್ರಶ್ನಿಸಬೇಕಿದೆ. ಈಗಿನ ತಲ್ಲಣವೇನು? ಇದಕ್ಕೆ ಕಾರಣ ಯಾರು? ಇದಕ್ಕೆ ಪರಿಹಾರ ಏನು? ಎಂಬುದರ ಕುರಿತು ಜನಸಾಮಾನ್ಯರಿಗೆ ಸಾಹಿತ್ಯದ ಮೂಲಕ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.

ರಾಜಕಾರಣಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ವ್ಯವಹಾರಕ್ಕೆ ಇಳಿದಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ಬಾಚಿಕೊಂಡು ಆಸ್ತಿ, ಹಣ ಸಂಪಾದಿಸುತ್ತಿದ್ದಾರೆ. ಇದೆಲ್ಲ ನಶ್ವರ. ಭೋಗದ ತುತ್ತತುದಿಯಲ್ಲಿ ವೈರಾಗ್ಯ ಎಂಬ ಜೈನ ಧರ್ಮ ಸಂದೇಶದಿಂದ ರಾಜಕಾರಣಗಳು ಪಾಠ ಕಲಿಯಬೇಕಿದೆ ಎಂದು ಕುಟುಕಿದರು.

ಅಹಿಂಸೆ, ಜೀವನ ಧ್ಯೇಯಕ್ಕೆ ಒತ್ತು ನೀಡುವ ಜೈನ ಧರ್ಮ ವಿಚಾರಗಳು ಪ್ರಸ್ತುತವಾಗಿದೆ. ಇದನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕಾಗಿದೆ. ಜತೆಗೆ, ಗಂಭೀರ ಸಾಹಿತ್ಯ ಮತ್ತು ಮೌಲ್ಯವನ್ನು ಪ್ರತಿಪಾದನೆ ಮಾಡುವ ಜೈನ ಸಾಹಿತ್ಯದ ಕುರಿತು ಅಧ್ಯಯನ ಮಾಡಬೇಕು. ಜೈನ ಧರ್ಮ ಮತ್ತು ಜೈನ ಸಾಹಿತ್ಯದಲ್ಲಿರುವ ಮೌಲ್ಯವನ್ನು ಬಿತ್ತುವ ಮೂಲಕ ಸಹಬಾಳ್ವೆ, ಸಹೋದರತೆ, ಮಾನವೀಯದತ್ತ ಸಮಾಜವನ್ನು ಮುನ್ನಡೆಸಬೇಕಾಗಿದೆ ಎಂದರು.

ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಾಯಿನಾಡು ಮಲ್ಲಿಗೆಮಾಡು, ಪ್ರಾಧ್ಯಾಪಕ ಪ್ರೊ.ಎನ್.ದೇವೇಂದ್ರಕುಮಾರ್, ಪತ್ರಕರ್ತ ಎಚ್.ನರಸಿಂಹರಾಜು ಇದ್ದರು.

ಮಾತನಾಡುವ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಮೌನ ವಹಿಸುವುದು ಬಹಳ ಅಪಾಯಕಾರಿ. ದೇಶದಲ್ಲಿ ಇಂತಹ ದುಸ್ಥಿತಿ ನಿರ್ಮಾಣವಾಗಿದೆ. ಪಂಪ ಮತ್ತು ರನ್ನ-ಪೊನ್ನ-ಜನ್ನ ಅವರೆಲ್ಲ ರಾಜಾಶ್ರಯದಲ್ಲೇ ಇದ್ದುಕೊಂಡು, ರಾಜಪ್ರಭುತ್ವ ವಿರುದ್ಧ ಸಾಹಿತ್ಯದ ಮೂಲಕ ಧ್ವನಿ ಎತ್ತಿದ್ದರು. ಅದೇ ಕೆಲಸವನ್ನೂ ಈಗಲೂ ಸಾಹಿತಿಗಳು ಬರವಣಿಗೆ ಮೂಲಕ ಮಾಡಬೇಕಿದೆ.ಡಾ.ಭೈರಮಂಗಲ ರಾಮೇಗೌಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net