ರಾಜ ರಾಣಿ ರೋರರ್ ರಾಕೆಟ್ ಸಿನಿಮಾ 23ಕ್ಕೆ ತೆರೆಗೆ

IMG-20220916-WA0046.jpg
Published on

ದಾವಣಗೆರೆ: ಹೊಸಬರೇ ನಟಿಸಿರುವ ‘ರಾಜ ರಾಣಿ ರೋರರ್ ರಾಕೆಟ್’ ಸಿನಿಮಾ ಸೆ.23ರಂದು ರಾಜ್ಯದ 50 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ನಾಗರಾಜ್ ಅಜ್ಜಂಪುರ ಹೇಳಿದರು.

ಕೊರಿಯಾಗ್ರಾಫರ್ ಭೂಷಣ್ ಮೊದಲ ಬಾರಿಗೆ ನಾಯಕನಟನಾಗಿ ಅಭಿನಯಿಸಿದ್ದು, ನಾಯಕನಟಿಯಾಗಿ ಕಿರುತೆರೆ ಕಲಾವಿದೆ ಮಾನ್ಯಾ ನಟಿಸಿದ್ದಾರೆ. ಎಂ.ಡಿ.ಕೌಶಿಕ್, ಜ್ಯೋತಿ, ಜಗ್ಗಿ ಮಾಸ್ಟರ್ ಸೇರಿ ಅನೇಕರ ತಾರಾಗಣವಿದೆ. ಚಿತ್ರ ನಿರ್ಮಾಣಕ್ಕೆ 1 ಕೋಟಿ ರೂ. ವೆಚ್ಚವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾಲ್ವರು ಮುಗ್ಧ ಸ್ನೇಹಿತರು ಮಾಡುವ ತಪ್ಪುಗಳು ಹಳ್ಳಿಯ ಮೇಲೆ ಸಕಾರಾತ್ಮಕವಾಗಿ ಪರಿಣಾಮ ಬೀರುವ ಕಥಾ ಹಂದರ ಸಿನಿಮಾದಲ್ಲಿದೆ. ಐದು ಹಾಡು, ಮೂರು ಫೈಟ್ ಇವೆ ಎಂದರು.

ನಟ ಭೂಷಣ್ ಮಾತನಾಡಿ ಡ್ಯಾನ್ಸ್‌ನಲ್ಲಿನ ಪರಿಣಿತರೇ ಮೊದಲ ಬಾರಿಗೆ ಒಟ್ಟಾಗಿ ನಟಿಸಿದ್ದೇವೆ. ಆದರೆ ಚಿತ್ರದಲ್ಲಿ ನೃತ್ಯದ ಕುರಿತಾದ ಯಾವುಧೇ ಬ್ರಾೃಂಡ್ ಮಾಡಿಲ್ಲ. ಪ್ರಭುದೇವ ಅವರನ್ನು ಬಿಟ್ಟರೆ ಕನ್ನಡದ ಡ್ಯಾನ್ಸ್ ಮಾಸ್ಟರ್ ಆಗಿ ಮೊದಲ ಬಾರಿಗೆ ನಾಯಕನಟನಾಗುವ ಅವಕಾಶ ದೊರೆತಿದೆ ಎಂದು ಹೇಳಿದರು.

ಚಿತ್ರಕ್ಕೆ ಮೊದಲಿದ್ದ ಶೀರ್ಷಿಕೆ ಬೇರೆ. ತರುಣ್ ಸುಧೀರ್ ಇದಕ್ಕೆ ರಾಜ ರಾಣಿ ರೋರರ್ ರಾಕೆಟ್ ಎಂದು ಹೆಸರಿಟ್ಟರು. ಅನಿರುದ್ಧ ಶಾಸ್ತ್ರಿ, ಚನ್ನಪ್ಪ, ಬಾಹುಬಲಿ ಹೆಗಡೆ ಮೊದಲಾದವರು ಹಾಡುಗಳನ್ನು ಹಾಡಿದ್ದಾರೆ ಎಂದು ತಿಳಿಸಿದರು.

ನಟಿ ಮಾನ್ಯಾ ಮಾತನಾಡಿ ಕನ್ನಡ, ತೆಲುಗು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದೇನೆ. ಇದು ನನ್ನ ಮೊದಲನೆ ಸಿನಿಮಾ. ಚಿತ್ರದಲ್ಲಿ ನನ್ನದು ಹಳ್ಳಿಯ ಸೀದಾ ಸಾದಾ ಹುಡುಗಿಯ ಪಾತ್ರ ಎಂದು ಹೇಳಿಕೊಂಡರು. ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಕೆಂಪೇಗೌಡ ಮಾಗಡಿ, ಸಹನಟ ಜಗದೀಶ್ ಇದ್ದರು.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net