

ನಂಜನಗೂಡು: ನಗರದ ರಾಷ್ಟ್ರಪತಿ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರಸ್ವಾಮಿಗಳ ಪ್ರತೀಕ ಸನ್ನಿಧಾನದಲ್ಲಿ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 352ನೇ ವರ್ಷದ ಆರಾಧನಾ ಮಹೋತ್ಸವಕ್ಕೆ ಪೂರ್ವಾರಾಧನೆಯೊಂದಿಗೆ ಗುರುವಾರ ಚಾಲನೆ ದೊರೆಯಿತು.
ರಾಘವೇಂದ್ರಸ್ವಾಮಿಗಳ ವಿಗ್ರಹವಿರುವ ಏಕೈಕ ಮಠ ಎನ್ನುವ ಹೆಗ್ಗಳಿಕೆ ಹೊಂದಿರುವ ನಂಜನಗೂಡಿನಲ್ಲಿ ರಾಯರ ಪಾದಪೂಜೆ ನಡೆಸಿದ ಬಳಿಕ ಮಠದ ಒಳಾವರಣದಲ್ಲಿ ರಥೋತ್ಸವ ಜರುಗಿತು. ರಾಯರಿಗೆ ವರ್ಣಂಕೃತದೊಂದಿಗೆ ಮುಂಜಾನೆ ಪಂಚಾಮೃತ ಅಭಿಷೇಕ ನಡೆಯಿತು. ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು.
ಮಠದ ಗರ್ಭಗುಡಿ ಸೇರಿದಂತೆ ಒಳಾವರಣ, ಮುಖ್ಯ ಪ್ರಾಂಗಣದಲ್ಲಿ ಮಾಡಿದ್ದ ಬಗೆಬಗೆಯ ಹೂವಿನ ಅಲಂಕಾರ ಭಕ್ತರ ಕಣ್ಮನ ಸೆಳೆಯಿತು. ಬೆಳಗ್ಗೆಯಿಂದ ರಾತ್ರಿವರೆಗೂ ಭಕ್ತರು ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು. ಮಧ್ಯಾಹ್ನ ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಆರಾಧನಾ ಮಹೋತ್ಸವ ಮುನ್ನ ದಿನವಾದ ಬುಧವಾರ ಧಾನ್ಯಪೂಜೆ, ಗೋಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಲಾಗಿತ್ತು. ಗುರುಸಾರ್ವಭೌಮರು ಬೃಂದಾವನ ಪ್ರವೇಶ ಮಾಡಿದ ಅಂಗವಾಗಿ ಶುಕ್ರವಾರ ಮಧ್ಯಾರಾಧನೆ ಹಾಗೂ ಶನಿವಾರ ಉತ್ತರಾಧನೆ ನೆರವೇರಲಿದೆ.
ಭಕ್ತರು ಮಠಕ್ಕೆ ಸಾಗರೋಪಾದಿಯಲ್ಲಿ ಆಗಮಿಸಿ ರಾಯರ ಕೃಪೆಗೆ ಪಾತ್ರರಾದರು. ಮೊದಲ ದಿನ ವಿದುಷಿ ಕೋವಿಲಡಿ ಆರ್.ಕಲಾ ಹಾಗೂ ಅರ್ಚನಾ ಅವರು ನಡೆಸಿಕೊಟ್ಟ ದಾಸವಾಣಿ ಕಾರ್ಯಕ್ರಮ ಕೇಳುಗರನ್ನು ಮಂತ್ರಮುಗ್ಧಗೊಳಿಸಿತು. ಸೆ.3ರಂದು ರಂದು ಸುಜ್ಞಾನೇಂದ್ರತೀರ್ಥರ ಆರಾಧನೆಯೊಂದಿಗೆ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದು ಮಠದ ವ್ಯವಸ್ಥಾಪಕ ಕೆ.ಸುಧಾಕರ್ ತಿಳಿಸಿದರು.