

ಚನ್ನರಾಯಪಟ್ಟಣ: ಪಟ್ಟಣದ ಕೋಟೆ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀ ಗುರುಗಳ 352ನೇ ಆರಾಧನಾ ಮಹೋತ್ಸವದ ಪ್ರಯುಕ್ತ ಶುಕ್ರವಾರ ಮಧ್ಯಾರಾಧನೆ ಭಕ್ತಿಪೂರ್ವಕವಾಗಿ ನಡೆಯಿತು.
ಶ್ರೀ ಮಠಕ್ಕೆ ತಾಲೂಕಿನ ವಿವಿಧೆಡೆಗಳಿಂದ ಭಕ್ತ ಸಮೂಹ ಶ್ರೀಮಠಕ್ಕೆ ಆಗಮಿಸಿ ಗುರುದರ್ಶನ ಪಡೆದರು. ಮಠದಲ್ಲಿ ಅಲಂಕೃತವಾಗಿದ್ದ ಬೃಂದಾವನ ಭಕ್ತರ ಮನಸೂರೆಗೊಂಡಿತ್ತು.
ರಾಯರ 352ನೇ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಮುಂಜಾನೆ ಮಧ್ಯಾರಾಧನೆ ನಿಮಿತ್ತ ಉಷಾಕಾಲ ಪೂಜೆ ಪಂಚಾಮೃತ ಅಭಿಷೇಕ ಮತ್ತು ರಾಯರ ಪಾದಪೂಜೆ ಹಾಗೂ ಬೃಂದಾವನಕ್ಕೆ ಹೂ ಅಲಂಕಾರ ಮಾಡಲಾಯಿತು. ಜತೆಯಲ್ಲಿ ಅಲಂಕಾರ ಪಂಕ್ತಿಯ ಬ್ರಾಹ್ಮಣ ಪೂಜೆ ಮತ್ತು ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು.
ಮಧ್ಯಾರಾಧನೆಯಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ನಿರಂತರವಾಗಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ರಾಯರ ಮಠದಲ್ಲಿ ಸಂಜೆ ಗಾಯಕರಾದ ಹರ್ಷ ಎನ್.ಕೌಂಡಿನ್ಯ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶ್ರೀಮಠಕ್ಕೆ ಭಕ್ತರು ಶ್ರದ್ಧಾ ಭಕ್ತಿಯಿಂದ ನಮನ ಸಲ್ಲಿಸಿ ಗುರುಗಳ ದರ್ಶನ ಪಡೆದರು.