

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಯಾಲಕ್ಕಿಶೆಟ್ಟರ್ ಕಾಲನಿಯ ಪುರಂದರ ಮಂಟಪದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 430ನೇ ವರ್ಧಂತಿ ಉತ್ಸವವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.
ಬೆಳಗ್ಗೆ ರಾಯರಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಸೇವೆಗಳು ನೆರವೇರಿದವು. ನಂತರ ಬಂಡಾಚಾರ್ಯ ಗಿಡದುಬ್ಬಳ್ಳಿ, ವಿಜಯವಿಠಲ ಆಚಾರ್ ಪೌರೋಹಿತ್ಯದಲ್ಲಿ ಶ್ರೀ ರಾಘವೇಂದ್ರ ಅಷ್ಟಾಕ್ಷರ ಹೋಮ ನೆರವೇರಿತು. ಪುರಂದರ ಅಷ್ಟೋತ್ತರ ಮಂಡಳಿಯಿಂದ ರಾಯರ ಅಷ್ಟೋತ್ತರ ಪಾರಾಯಣ, ಸೌಭಾಗ್ಯ ಭಜನಾ ಮಂಡಳಿಯಿಂದ ರಾಯರ ಹಾಡುಗಳ ಪ್ರಸ್ತುತಿ ನಡೆದವು.
ಮಧ್ಯಾಹ್ನ ರಾಯರ ರಥೋತ್ಸವ, ಭಜನಾ ಮಂಡಳಿ ಸದಸ್ಯರಿಂದ ಡೋಲೋತ್ಸವದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಧರ್ಮದರ್ಶಿ ಸಿ. ನಾಗರಾಜ್, ರಮೇಶ ಕುಲಕರ್ಣಿ, ಅರವಿಂದ ನಾಗಜ್ಜನವರ, ರಮೇಶ ಮುಜುಂದಾರ್, ಪಪ್ಪು ಆಚಾರ್, ಎಚ್.ಎನ್. ಪಾಟೀಲ, ಅಡವಿ ರಾವ್ ದೇಸಾಯಿ, ವೇದವತಿ ನಾಗರಾಜ್, ರಜನಿ ಕುಲಕರ್ಣಿ, ಇತರರು ಇದ್ದರು.