

ಕೋಲಾರ: ನಗರದ ಬ್ರಾಹ್ಮಣರ ಬೀದಿಯಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠವು ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಭವ್ಯವಾಗಿ ಮರು ನಿರ್ಮಾಣಗೊಂಡಿದ್ದು, ಭಾನುವಾರ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದರು.
ಕೋವಿಡ್ ಹಿನ್ನೆಲೆಯಲ್ಲಿ ಸ್ವಾಮಿಗಳ ಸಲಹೆಯಂತೆ ಮಠದ ಆಡಳಿತ ಮಂಡಳಿಯವರು ಸರಳವಾಗಿ ಕಾರ್ಯಕ್ರಮ ಆಯೋಜಿಸಿದ್ದರು. ಮಾ.24ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮವನ್ನು ಸ್ವಾಮಿಗಳ ಸೂಚನೆ ಮೇರೆಗೆ ಒಂದು ತಿಂಗಳ ಮುನ್ನವೇ ಏರ್ಪಡಿಸಿದ್ದ ಆಡಳಿತ ಮಂಡಳಿ ಸ್ವಾಮಿಗಳ ಆಶಯದಂತೆ ಪೂಜಾ ವಿಧಿ ನಡೆಸಿತು.
ಮಠದ ಮರು ನಿರ್ಮಾಣಕ್ಕೆ ಶ್ರಮಿಸಿದ್ದ ಕಾರ್ಯದರ್ಶಿ ಎನ್.ಕೆ.ಅಚ್ಯುತಾ ಅವರು ಕಳೆದ ಅಕ್ಟೋಬರ್‌ನಲ್ಲಿ ತೀರಿಕೊಂಡಿದ್ದರಿಂದ ಜೀರ್ಣೋದ್ಧಾರ ಕಾಮಗಾರಿಗೆ ಕೊಂಚ ಹಿನ್ನಡೆಯಾಗಿತ್ತಾದರೂ ಆಡಳಿತ ಮಂಡಳಿ ಅಚ್ಯುತಾ ಅವರ ಕನಸು ಈಡೇರಿಸಲು ಪಣತೊಟ್ಟಿದ್ದರಿಂದ ಕಾಮಗಾರಿಯನ್ನು ಜನವರಿಯಲ್ಲೇ ಮುಗಿಸಲಾಗಿತ್ತು.
ಮಠದಲ್ಲಿ ಶ್ರೀ ಲಕ್ಷ್ಮೀನರಸಿಂಹ ದೇವರ ವಿಗ್ರಹ ಪ್ರತಿಷ್ಠಾಪನೆ ಮತ್ತು ಮುಖ್ಯ ಪ್ರಾಣದೇವರ ವಿಗ್ರಹ, ಶ್ರೀ ಮಧ್ವಾಚಾರ್ಯ, ಶ್ರೀ ಜಯತೀರ್ಥರ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ವಂದಾವನಗಳ ಮರು ಪ್ರತಿಷ್ಠಾಪನೆಯನ್ನು ಸುಬುಧೇಂದ್ರ ತೀರ್ಥರು ನೆರವೇರಿಸಿದರು.
ಮಠದ ಟ್ರಸ್ಟ್ ಅಧ್ಯಕ್ಷ ಎನ್.ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ಕೆ.ವಿ.ವಿಶ್ವನಾಥ ವೈದ್ಯ, ಸದಸ್ಯರಾದ ಜಿ.ಎಸ್.ಜಯತೀರ್ಥಾಚಾರ್, ಡಾ.ವಿ.ಎಸ್.ಕೃಷ್ಣಮೂರ್ತಿ, ಸಿ.ಎಸ್.ರಘುನಾಥ್, ವೇದಾವತಿ ಗುರುರಾವ್, ಮಾಜಿ ಪ್ರಧಾನ ಕಾರ್ಯದರ್ಶಿ ದಿ.ಎನ್.ಕೆ.ಅಚ್ಯುತಾ ಅವರ ಪುತ್ರ ಶ್ರೀನಿಧಿ ಹಾಗೂ ಬ್ರಾಹ್ಮಣರ ಸಂಘದ ಮುಖಂಡ ಹಾಬಿ ರಮೇಶ್ ಇನ್ನಿತರರಿದ್ದರು.