

ಹಾಸನ: ಅಕ್ಕಿ ಮತ್ತು ಇತರೆ ಧಾನ್ಯಗಳಿಗಿಂತ ರಾಗಿ ಶ್ರೇಷ್ಠವಾದ ಆಹಾರ. ಇತರೆ ಧಾನ್ಯಗಳಿಗಿಂತ ರಾಗಿಯಲ್ಲಿ ಹೆಚ್ಚು ಪೋಷಕಾಂಶಗಳು ಇವೆ ಎಂದು ಹಾಸನ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ವಿಜಯ ಅಂಗಡಿ ಅವರು ಹೇಳಿದರು.
ಹಾಸನದ ರೋಟರಿ ಸಂಸ್ಥೆ ಗುರುವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಗಿ ಮತ್ತು ಇತರೆ ಸಿರಿ ಧಾನ್ಯಗಳನ್ನು ಬೆಳೆಯಲು ಹೆಚ್ಚು ನೀರನ್ನು ವ್ಯಯಿಸಬೇಕಿಲ್ಲ. ಇವು ಪರಿಸರಕ್ಕೂ ಹಿತ, ಆರೋಗ್ಯ ಕಾಪಾಡುವ ನಿಟ್ಟಿನಲ್ಲೂ ಪ್ರಯೋಜನಕಾರಿ ಎಂದು ಸಲಹೆ ನೀಡಿದರು.
ರಾಗಿಯಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಶಿಯಂ, ಕ್ರೋಮಿಯಂ, ನಾರಿನ ಅಂಶ ಅಕ್ಕಿ ಸೇರಿದಂತೆ ಇತರೆ ಧಾನ್ಯಗಳಿಗಿಂತ ಅತ್ಯಧಿಕ ಪ್ರಮಾಣದಲ್ಲಿ ಇದೆ. ಇದರಿಂದ ಸಹಜವಾಗಿ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ರಾಗಿ ಶ್ರೇಷ್ಠವಾದ ಧಾನ್ಯವಾಗಿದೆ. ‘ರಾಗಿ ತಿಂದವ ನಿರೋಗಿ’ ಎಂಬ ನಾಣ್ಣುಡಿಯಂತೆ ಪ್ರತಿಯೊಬ್ಬರೂ ದಿನನಿತ್ಯ ರಾಗಿಯ ಸೇವನೆ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಡಿಜಿಎನ್ ಪಾಲಾಕ್ಷ, ಅಧ್ಯಕ್ಷ ಗಿರೀಶ್ ಕುಮಾರ್, ಕಾರ್ಯದರ್ಶಿ ಶ್ರೀನಾಥ್ ಮತ್ತು ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.