

ಬೆಂಗಳೂರು ಗ್ರಾಮಾಂತರ: ರಾಗಿ ಬೆಳೆಯೇ ಪ್ರಧಾನವಾದ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಜಡಿಮಳೆ ರಾಗಿ ಸಲಿಗೆ ಕಂಟಕವಾಗಿದೆ. ಕಳೆದೆರಡು ವರ್ಷದಿಂದ ಭರ್ಜರಿ ಬೆಳೆ ಕಂಡಿರುವ ಜಿಲ್ಲೆಯ ರೈತರು ಅಕಾಲಿಕ ಮಳೆಯಿಂದ ಕಂಗಾಲಾಗಿದ್ದಾರೆ. ಕಟಾವು ಪ್ರಕ್ರಿಯೆ ಆರಂಭಿಸಲು ಸಿದ್ಧತೆ ನಡೆಸಿದ್ದ ರೈತರು ಕೈಗೆಬಂದ ತುತ್ತು ಬಾಯಿಗೆ ಇಲ್ಲದಂತಾಗುವುದೇ ಎಂಬ ಚಿಂತೆಗೀಡಾಗಿದ್ದಾರೆ.
ಜಿಲ್ಲೆಯಲ್ಲಿ ಪ್ರಸ್ತುತ 60 ಸಾವಿಕ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ, ಇದರಲ್ಲಿ ಶೇ.10 ರೈತರು ಜುಲೈನಲ್ಲೇ ರಾಗಿ ಬಿತ್ತನೆ ಮಾಡಿದ್ದು, ಸಲು ಕಟಾವಿಗೆ ಬಂದಿದೆ. ಆದರೆ ವಾಯುಭಾರ ಕುಸಿತದಿಂದ ಸುರಿಯುತ್ತಿರುವ ಜಡಿಮಳೆಯಿಂದಾಗಿ ಕಟಾವು ಪ್ರಕ್ರಿಯೆ ಮಾಡಲಾಗುತ್ತಿಲ್ಲ, ಜತೆಗೆ ತೆನೆಗಳು ನೆಲಕ್ಕೆ ಭಾಗುತ್ತಿದ್ದು, ಸಲು ನಷ್ಟವಾಗುವ ಪರಿಸ್ಥಿತಿ ಎದುರಾಗಿದೆ. ಜಡಿಮಳೆ ನಿಂತರಷ್ಟೆ ಭರ್ಜರಿ ಸಲು ಕಾಣಲು ಸಾಧ್ಯ. ಮಳೆ ಹೀಗೆ ಮುಂದುವರಿದರೆ ರೈತರು ಭಾರಿ ನಷ್ಟ ಎದುರಿಸುವ ಆತಂಕ ಮನೆಮಾಡಿದೆ.
ತೇವಾಂಶದಿಂದ ಮೊಳಕೆ: ನಿರಂತರ ಮಳೆಯಿಂದ ತೇವಾಂಶ ಹೆಚ್ಚಾಗಿದ್ದು, ರಾಗಿ ತೆನೆಗಳು ನೆಲಕ್ಕೆ ಬಾಗಿದ್ದು, ಮೊಳಕೆ ಬರುವ ಆತಂಕ ಸೃಷ್ಟಿಸಿದೆ. ಜಿಲ್ಲೆಯಲ್ಲಿ ಮಳೆಯಾಶ್ರಿತ ಪ್ರದೇಶದ ಭೂಮಿಯೇ ಹೆಚ್ಚಾಗಿದ್ದು, ಈ ಬಾರಿ ಉತ್ತಮ ಮಳೆಯಿಂದಾಗಿ ಫಸಲು ಭರ್ಜರಿಯಾಗಿ ಬೆಳೆದು ನಿಂತಿದೆ. ಆದರೆ ಆಕಾಲಿಕ ಮಳೆ ಭರ್ಜರಿ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಜು.ಆರಂಭದಲ್ಲೇ ರಾಗಿ ಬಿತ್ತನೆ ಮಾಡಿರುವ ರೈತರು ಈ ಅಕಾಲಿಕ ಮಳೆಯಿಂದ ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚಿದೆ. ಇದು ಜಿಲ್ಲೆಯಲ್ಲಿ ಶೇ.10ರಷ್ಟಿದೆ, ಉಳಿದಂತೆ ನವೆಂಬರ್ ಎರಡನೇ ವಾರದ ಬಳಿಕ ಜಿಲ್ಲೆಯಾದ್ಯಂತ ಕಟಾವು ಪ್ರಕ್ರಿಯೆ ಆರಂಭವಾಗಲಿದೆ, ಮಳೆ ಮುಂದುವರಿದರೆ ಸಲಿಗೆ ಹಾನಿಯಾಗಲಿದೆ. ಜಯಸ್ವಾಮಿ, ಜಂಟಿ ನಿರ್ದೇಶಕ ಕೃಷಿ ಇಲಾಖೆ
ರೇಷ್ಮೆಗೂ ಕುತ್ತೂ: ಜಡಿಮಳೆಯಿಂದ ಶೀತ ವಾತಾವರಣ ಹೆಚ್ಚಿದ್ದು, ರೇಷ್ಮೆಗೆ ಸುಣ್ಣ ಕಟ್ಟು ರೋಗ, ಹಾಲು ತೊಂಡೆ ರೋಗ ಕಾಣಿಸಿಕೊಂಡು ರೇಷ್ಮೆ ಬೆಳೆಗಾರರು ಅತಂಕಕ್ಕೊಳಗಾಗಿದ್ದಾರೆ. ಕಳೆದೆರಡು ವರ್ಷದಿಂದ ಕರೊನಾ ಕಾರಣದಿಂದ ರೈತರು ರೇಷ್ಮೆ ಬೆಳೆಗೆ ಬೆಲೆ ಸಿಗದೆ ಕಂಗಲಾಗಿದ್ದರು. ಈ ಬಾರಿ ಉತ್ತಮ ಬೆಲೆ ಸಿಕ್ಕರೂ ಕೆಲ ದಿನಗಳಿಂದ ಸುರಿಯುತ್ತಿರುವ ಜಡಿ ಮಳೆ ರೈತರನ್ನು ಮತ್ತಷ್ಟು ಕಂಗೆಡೆಸಿದೆ. ಇದರ ಬೆನ್ನಲ್ಲೆ ಸುಣ್ಣಕಟ್ಟು ರೋಗದಿಂದ ನಿರೀಕ್ಷಿತ ಇಳುವರಿ ಇಲ್ಲದೆ ರೇಷ್ಮೆ ಹುಳು ಸಾಕಣೆಯಲ್ಲಿ ವ್ಯತ್ಯಾಸವಾಗುತ್ತಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ವಿಶಾಖ ಮಳೆ ಸುರಿಯಬೇಕಿತ್ತು. ಆದರೆ ವಾಯುಭಾರ ಕುಸಿತದಿಂದ ಸುರಿಯುತ್ತಿರುವ ಜಡಿಮಳೆ ರೈತರ ಅರ್ಥಿಕ ಪರಿಸ್ಥಿತಿಗೆ ಬರೆ ಹಾಕುತ್ತಿದೆ.