ರಾಗಿ ಮಾರಾಟಕ್ಕೆ ಉತ್ತಮ ಸ್ಪಂದನೆ : 62,618 ಕ್ವಿಂಟಾಲ್ ಮಾರಾಟಕ್ಕೆ ನೋಂದಣಿ

Published on
ಬಂಗಾರಪೇಟೆ ಪಟ್ಟಣದ ಕೆಎಫ್‌ಸಿಎಸ್‌ಸಿ ರಾಗಿ ಖರೀದಿ ಕೇಂದ್ರದಲ್ಲಿ ರೈತರು ರಾಗಿ ಮಾರಾಟಕ್ಕೆ ನೊಂದಣಿ ಮಾಡಿಸಲು ಸರತಿಯಲ್ಲಿ ನಿಲ್ಲುತ್ತಿದ್ದಾರೆ.
ಬಂಗಾರಪೇಟೆ ಪಟ್ಟಣದ ಕೆಎಫ್‌ಸಿಎಸ್‌ಸಿ ರಾಗಿ ಖರೀದಿ ಕೇಂದ್ರದಲ್ಲಿ ರೈತರು ರಾಗಿ ಮಾರಾಟಕ್ಕೆ ನೊಂದಣಿ ಮಾಡಿಸಲು ಸರತಿಯಲ್ಲಿ ನಿಲ್ಲುತ್ತಿದ್ದಾರೆ.

ಬೂದಿಕೋಟೆ: ಬೆಂಬಲ ಬೆಲೆ ಯೋಜನೆಯಡಿ ಬರೋಬ್ಬರಿ 62,618 ಕ್ವಿಂಟಾಲ್ ರಾಗಿ ಮಾರಾಟಕ್ಕೆ ಬಂಗಾರಪೇಟೆ ತಾಲೂಕು ರೈತರು ನೋಂದಣಿ ಮಾಡಿಸಿದ್ದಾರೆ.
ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯಬೇಕೆಂಬ ಉದ್ದೇಶದಿಂದ ಸರ್ಕಾರ ಬೆಂಬಲ ಬೆಲೆ ಘೋಷಿಸಿದೆ. ಅದರಂತೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ತೆರೆಯಲಾಗಿರುವ ಕೇಂದ್ರಗಳಲ್ಲಿ ರಾಗಿ ಮಾರಾಟ ಮಾಡಲು ಕಳೆದ ಮೂರ್ನಾಲ್ಕು ವರ್ಷಗಳಿಗಿಂತ ಈ


ವರ್ಷ ರೈತರು ಹೆಚ್ಚಿನ ಆಸಕ್ತಿ ತೋರಿದ್ದಾರೆ.
4,366 ರೈತರು ನೋಂದಣಿ: ಕಳೆದ ಡಿ.15ರಿಂದ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟಕ್ಕೆ ನೋಂದಣಿ ಪ್ರಕ್ರಿಯೆ ಆರಂಭವಾಗಿತ್ತು. ನೋಂದಣಿ ಕಾರ್ಯ ತಾಲೂಕಿನಲ್ಲಿ ಇನ್ನೂ ನಡೆಯುತ್ತಿದೆ. ಕಳೆದ ವರ್ಷ ಕ್ವಿಂಟಾಲ್ ರಾಗಿಗೆ 3,377 ರೂ. ನಿಗದಿ ಮಾಡಲಾಗಿತ್ತು. 4,094 ರೈತರು ಒಟ್ಟು 56,775 ಕ್ವಿಂಟಾಲ್ ಮಾರಾಟ ಮಾಡಿದ್ದರು.
ಈ ವರ್ಷ ಕ್ವಿಂಟಾಲ್ಗೆ 201 ರೂಪಾಯಿ ಏರಿಕೆ ಮಾಡಲಾಗಿದೆ.
ಎಕರೆಗೆ 10 ಕ್ವಿಂಟಾಲ್ನಂತೆ 20 ಕ್ವಿಂಟಾಲ್ವರೆಗೂ ರಾಗಿ ಮಾರಾಟ ಮಾಡಲು ಸರ್ಕಾರ ಅವಕಾಶ
ಕಲ್ಪಿಸಿದೆ. 5 ಎಕರೆಗಿಂತ ಹೆಚ್ಚು ಭೂಮಿ ಇರುವ ದೊಡ್ಡ ರೈತರಿಗೆ ಅವಕಾಶ ನೀಡಿಲ್ಲ.

ಅಸಮರ್ಪಕ ಬೆಳೆ ಸಮೀಕ್ಷೆ
ಈ ಬಾರಿಯೂ ಬೆಳೆ ಸಮೀಕ್ಷೆಯಲ್ಲಿ ರಾಗಿ ಬೆಳೆಯನ್ನು ಸರಿಯಾಗಿ ನಮೂದು ಮಾಡದ ಕಾರಣದಿಂದ ಬಹಳಷ್ಟು ರೈತರು ರಾಗಿ ಮಾರಾಟದಿಂದ ವಂಚಿತರಾಗಿದ್ದಾರೆ. ಅವರಿಗೂ ಅವಕಾಶವಿದ್ದರೆ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ರಾಗಿ ಮಾರಾಟಕ್ಕೆ ರೈತರು ನೋಂದಣಿ ಮಾಡಿಸುತ್ತಿದ್ದರು.

ರಾಗಿ ಖರೀದಿಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹಳಷ್ಟು ರೈತರ ಬೆಳೆ ಸಮೀಕ್ಷೆಯಲ್ಲಿ ಬೆಳೆ ನಮೂದು ಆಗದ ಕಾರಣ ಖರೀದಿ ಕೇಂದ್ರಕ್ಕೆ ಬಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಸರ್ಕಾರ ರಾಗಿ ಖರೀದಿಗೆ ದಿನಾಂಕ ನಿಗದಿಪಡಿಸಿಲ್ಲದ ಕಾರಣ ರಾಗಿ ಪಡೆಯುತ್ತಿಲ್ಲ. ಆದರೂ ರೈತರು ಬಂದು ಹೋಗುತ್ತಿದ್ದಾರೆ.
ಕಲೀಂ ಉಲ್ಲಾ ಷರ್ೀ ಖರೀದಿ ಅಧಿಕಾರಿ, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಬಂಗಾರಪೇಟೆ

5 ಎಕರೆಗಿಂತ ಹೆಚ್ಚಿರುವ ರೈತರನ್ನು ದೊಡ್ಡ ರೈತರು ಎಂದು ಗುರುತಿಸಲಾಗಿದೆ. ಬೆಳೆದ ರಾಗಿಗೆ ಸರ್ಕಾರ ಬೆಂಬಲ ಬೆಲೆ ನೀಡಿ ಪಡೆಯದ ಕಾರಣ ವಿಧಿಯಿಲ್ಲದೆ ರಾಗಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ದೊಡ್ಡ ರೈತರನ್ನು ಗಮನದಲ್ಲಿಟ್ಟುಕೊಂಡು ಮುಂದೆ ರಾಗಿ ಖರೀದಿಗೆ ಅವಕಾಶ ನೀಡಬೇಕು. ನಾರಾಯಣಪ್ಪ ರೈತ, ತೊಪ್ಪನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net