

ಬೆಂಗಳೂರು ಗ್ರಾಮಾಂತರ: ಮಳೆಯಿಂದ ಹಾನಿಯಾಗಿರುವ ಬೆಳೆ ಸಮೀಕ್ಷೆ ನಡೆಸಿ, ನಷ್ಟಕ್ಕೆ ಶೀಘ್ರ ಪರಿಹಾರ ದೊರಕಿಸುವ ಜತೆಗೆ ರಾಗಿ ಖರೀದಿ ಕೇಂದ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯುವ ಮೂಲಕ ಕೃಷಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚಿಸಿರು.
ದೇವನಹಳ್ಳಿ ತಾಲೂಕು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಹವಾಮಾನ ವೈಪರೀತ್ಯದಿಂದ 20 ದಿನಗಳಿಂದ ಹೆಚ್ಚಿನ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ರಾಗಿ ಪ್ರಧಾನ ಬೆಳೆಯಾಗಿದ್ದು, ಕಟಾವಿನ ಸಮಯದಲ್ಲಿ ಮಳೆಯಿಂದಾಗಿ ರೈತರು ಆರ್ಥಿಕ ನಷ್ಟ ಎದುರಿಸುವಂತಾಗಿದೆ. ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ ಬೆಳೆನಷ್ಟಕ್ಕೆ ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ವಿದ್ಯಾರ್ಥಿವೇತನ ನೀಡಲಾಗುತ್ತಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ನಿಗದಿತ ಸಮಯದಲ್ಲಿ ವಿದ್ಯಾರ್ಥಿವೇತನ ತಲುಪಿಸಬೇಕು ಎಂದು ತಿಳಿಸಿದರು.
ಕಟ್ಟಡ ಮಂಜೂರು: ಜಿಲ್ಲೆಯ ವಿದ್ಯಾರ್ಥಿ ನಿಲಯಗಳಲ್ಲಿ ಸೋಲಾರ್ ವ್ಯವಸ್ಥೆ, ಶೌಚಗೃಹ ಒಳಗೊಂಡಂತೆ ಮೂಲ ಸೌಕರ್ಯ ಸಮರ್ಪಕ ನಿರ್ವಹಣೆ ಬಗ್ಗೆ ಕ್ರಮ ಜರುಗಿಸಲು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚಿಸಿದರು. ದೇವನಹಳ್ಳಿ ತಾಲೂಕಿನಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಕಟ್ಟಡ ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶಾಲಾ-ಕಾಲೇಜುಗಳಲ್ಲಿ ಗಿರಿಜನೋತ್ಸವ ಸೇರಿ ವಿವಿಧ ಕಾರ್ಯಕ್ರಮ ಆಯೋಜಿಸಿ, ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಮೂಡಿಸಬೇಕು ಎಂದರು.
ಅನುದಾನ ಬಳಕೆ ಮಾಡಿ: ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ವಿವಿಧ ಇಲಾಖೆಗಳಿಗೆ ನಿಗದಿಗೊಳಿಸಿರುವ ಅನುದಾನವನ್ನು ಆರ್ಥಿಕ ವರ್ಷದ ಅಂತ್ಯದೊಳಗೆ ಪೂರ್ಣವಾಗಿ ಬಳಸುವ ಮೂಲಕ ಶೇ. ನೂರರಷ್ಟು ಆರ್ಥಿಕ ಹಾಗೂ ಭೌತಿಕ ಪ್ರಗತಿ ಸಾಧಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ್ ಹೇಳಿದರು.
ಆಯಾ ಇಲಾಖೆ ಅಧಿಕಾರಿಗಳು ಅನುದಾನ ಸದ್ಬಳಕೆ ಮಾಡುವ ಮೂಲಕ ಜಿಲ್ಲೆಯ ಪ್ರಗತಿಗೆ ಶ್ರಮಿಸಬೇಕು ಎಂದು ಹೇಳಿದರು.
ಸರ್ಕಾರದ ವಿವಿಧ ಯೋಜನೆಗಳ ಕುರಿತು ಇಲಾಖೆವಾರು ಮಾಹಿತಿ ಪಡೆದು, ಪರಿಶೀಲನೆ ನಡೆಸಿದರು. ವಿಧವಾ ಪುನರ್ವಿವಾಹ ಕುರಿತು ಜನರಲ್ಲಿ ಅರಿವು ಮೂಡಿಸಲು ಸ್ಥಳೀಯಮಟ್ಟದಲ್ಲೇ, ಜಾಗೃತಿ ಕಾರ್ಯಕ್ರಮ ರೂಪಿಸುವ ಮೂಲಕ ವಿಧವಾ ಪುನರ್ವಿವಾಹಕ್ಕೆ ಉತ್ತೇಜಿಸಬೇಕು. ಈ ಯೋಜನೆಯಡಿ ಬಾಕಿ ಉಳಿದಿರುವ ಅನುದಾನವನ್ನು ಸಮರ್ಪಕವಾಗಿ ಬಳಸಬೇಕು ಎಂದು ಎಡಿಸಿ ಹೇಳಿದರು.