

ಚಿಕ್ಕಬಳ್ಳಾಪುರ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮತ್ತು ಬಿಳಿಜೋಳ ಖರೀದಿಗೆ ನೋಂದಣಿ ಪ್ರಕ್ರಿಯೆ ಡಿ. 22 ರಿಂದ ಪ್ರಾರಂಭವಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ರಾಗಿ ಮತ್ತು ಬಿಳಿಜೋಳ ಖರೀದಿ ಕುರಿತ ಜಿಲ್ಲಾ ಟಾಸ್‌ಕೆೆರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು. ಸರ್ಕಾರದ ನಿರ್ದೇಶನದ ಅನ್ವಯ ಜಿಲ್ಲೆಯ ರೈತರಿಂದ ರಾಗಿ ಮತ್ತು ಬಿಳಿಜೋಳ ಖರೀದಿಸಲಾಗುತ್ತದೆ. ಪ್ರತಿ ಕ್ವಿಂಟಾಲ್ ರಾಗಿಗೆ ರೂ.3377 ಹಾಗೂ ಪ್ರತಿ ಕ್ವಿಂಟಾಲ್ ಬಿಳಿಜೋಳ ಹೈಬ್ರಿಡ್ 2738 ಮತ್ತು ಬಿಳಿಜೋಳ ಮಾಲ್ದೃಂಡಿ 2758 ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಬಿತ್ತನೆಯಾದ ಒಟ್ಟು ರಾಗಿ ಬೆಳೆಯಲ್ಲಿ ಶೇ.59 ಬೆಳೆಯು ಈ ವರ್ಷ ಸುರಿದ ಧಾರಾಕಾರ ಮಳೆಗೆ ಹಾನಿಯಾಗಿದೆ. ಇನ್ನುಳಿದ ಬೆಳೆಗಾದರೂ ಸೂಕ್ತ ಬೆಲೆ ಸಿಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಯು ಜಿಲ್ಲೆಯ ರೈತರಿಗೆ ಹೆಚ್ಚಿನ ಸಹಕಾರಿಯಾಗಲಿದೆ. ಸರ್ಕಾರ ನಿಗದಿಪಡಿಸಿರುವ ರಾಗಿ ಬೆಂಬಲ ಬೆಲೆ ದರವು ಮಾರುಕಟ್ಟೆ ಬೆಲೆಗಿಂತ ಅಧಿಕವಾಗಿದೆ ಎಂದರು.
ರಾಗಿ ಮತ್ತು ಬಿಳಿಜೋಳ ಖರೀದಿಗೆ ಮಾರ್ಗಸೂಚಿ: ರಾಗಿ ಮತ್ತು ಬಿಳಿಜೋಳ ಖರೀದಿ ಹಂತದಲ್ಲಿ ಕೇಂದ್ರ ಸರ್ಕಾರವು ನಿಗದಿಪಡಿಸಿದ ಮಾನದಂಡಗಳ ಅನ್ವಯ ಎಫ್.ಎ.ಕ್ಯೂ ಗುಣಮಟ್ಟ ದೃಢೀಕರಿಸಲಾಗುತ್ತದೆ. ಖರೀದಿ ಏಜೆನ್ಸಿಯ ಹಿರಿಯ ಅಧಿಕಾರಿಗಳು ಆಗಿಂದಾಗ್ಗೆ ಮೇಲುಸ್ತುವಾರಿ ತಪಾಸಣೆ ಕೈಗೊಳ್ಳಲಿದ್ದು ಆಹಾರ ಧಾನ್ಯಗಳನ್ನು ಉತ್ತಮ ಗುಣಮಟ್ಟದ ಗೋಣಿ ಚೀಲದಲ್ಲಿಯೇ ಸಂಗ್ರಹಿಸಿ ಖರೀದಿಸಲು ಮತ್ತು ಗೋಣಿ ಚೀಲ ಖರೀದಿ ವೆಚ್ಚವಾಗಿ ಪ್ರತಿ 50 ಕೆ.ಜಿ.ಚೀಲಕ್ಕೆ ತಲಾ 22 ರೂ.ನೇರ ನಗದು ವರ್ಗಾವಣೆ ಮೂಲಕ ರತರಿಗೆ ಪಾವತಿಸಲಾಗುತ್ತದೆ. ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಠ 20 ಕ್ವಿಂಟಾಲ್ ರಾಗಿ ಅಥವಾ ಜೋಳ ಖರೀದಿಸಲಾಗುತ್ತದೆ. ಸರ್ಕಾರವು ನಿಗದಿಪಡಿಸಿರುವ ಪ್ರಮಾಣವನ್ನು ಮೀರಿ ಹೆಚ್ಚುವರಿಯಾಗಿ ರಾಗಿ ಹಾಗೂ ಜೋಳ ಖರೀದಿಸಲಾಗುವುದ್ಲಿ. 2021-22ನೇ ಸಾಲಿಗೆ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ರಾಗಿ ಮತ್ತು ಜೋಳ ಖರೀದಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತವನ್ನು ಸಂಗ್ರಹಣಾ ಏಜೆನ್ಸಿಯನ್ನಾಗಿ ಸರ್ಕಾರ ನೇಮಿಸಿದೆ. ಸರ್ಕಾರದ ನಿರ್ದೇಶನದಂತೆ ಸದರಿ ಯೋಜನೆಯಡಿ ರಾಗಿ ಮತ್ತು ಜೋಳವನ್ನು 2022ರ ಜ.1 ರಿಂದ ಮಾ.31 ರವರೆಗೆ ಜಿಲ್ಲೆಯಲ್ಲಿ ಖರೀದಿಸಲಾಗುತ್ತದೆ
ಸಹಾಯವಾಣಿ ಆರಂಭ: ಕನಿಷ್ಠ ಬೆಂಬಲ ಯೋಜನೆಯಡಿ ರಾಗಿ ಮತ್ತು ಜೋಳ ಮಾರುವ ಜಿಲ್ಲೆಯ ರೈತರಿಗೆ ನೋಂದಣಿ ಹಾಗೂ ಮಾರಾಟದ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ಸಮಸ್ಯೆಗಳು ಉಂಟಾದಲ್ಲಿ ಅಥವಾ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 08156277108 ಸಂಪರ್ಕಿಸಬಹುದು.
ಸಭೆಯಲ್ಲಿ ಆಹಾರ ಮತ್ತು ಸರಬರಾಜು ಇಲಾಖೆ ಉಪನಿರ್ದೇಶಕಿ ಸವಿತಾ, ತಹಸೀಲ್ದಾರ್ ಗಣಪತಿಶಾಸಿ, ಆಹಾರ ಮತ್ತು ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಚೌಡೇಗೌಡ ಉಪಸ್ಥಿತರಿದ್ದರು.