

ಬೇಲೂರು: ತಾಲೂಕಿನ ಜೋಗಿಹಳ್ಳಿ ಗ್ರಾಮದಲ್ಲಿ ಶುಕ್ರವಾರ ಜಮೀನಿನ ಅಂಗಳದಲ್ಲಿ ಶೇಖರಿಸಿಟ್ಟಿದ್ದ ರಾಗಿ ಬಣವೆ ಹಾಗೂ ಜೋಳದ ಸಬ್ಬೆಗೆ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾಗಿದೆ.
ತಾಲೂಕಿನ ಜೋಗಿಹಳ್ಳಿ ಗ್ರಾಮದ ರಾಮೇಗೌಡ ಎಂಬುವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ರಾಗಿ ಬೆಳೆಯನ್ನು ಒಪ್ಪ ಮಾಡುವ ಉದ್ದೇಶದಿಂದ ಜಮೀನಿನ ಅಂಗಳದಲ್ಲಿ ಹಾಗೆಯೇ ಬಿಟ್ಟಿದ್ದರು. ಜತೆಗೆ ಜೋಳವನ್ನು ಬಿಡಿಸಿ ಸಬ್ಬೆ ಮಾಡಿಟ್ಟಿದ್ದರು. ಆದರೆ ಶುಕ್ರವಾರ ಮುಂಜಾನೆ ಬೆಂಕಿ ತಗುಲಿ ರಾಗಿ ಹಾಗೂ ಜೋಳದ ಸಬ್ಬೆ ಸುಟ್ಟು ಹೋಗಿದೆ.
ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬರುವಷ್ಟರಲ್ಲಿ ರಾಗಿ ಮತ್ತು ಜೋಳದ ಸಬ್ಬೆ ಸಂಪೂರ್ಣ ಸುಟ್ಟು ಕರಲಾಗಿದ್ದು, ರೈತ ರಾಮೇಗೌಡರಿಗೆ ನಷ್ಟ ಉಂಟಾಗಿದೆ, ಇದರಿಂದಾಗಿ ಅವರು ಸಾಕಿರುವ ಹಸುಗಳಿಗೆ ಹುಲ್ಲು ಇಲ್ಲದಂತಾಗಿದ್ದು, ಪರಿಹಾರಕ್ಕಾಗಿ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.