ರಾಗಿ ಫಸಲಿಗೆ ವರುಣಾಘಾತ, ನೆಲಕಚ್ಚಿದ ತೆನೆ ನಷ್ಟದ ಭೀತಿ ಕಟಾವಿಗೆ ಆರ್ಥಿಕ ಹೊರೆ

ragi
Published on

ಬೆಂಗಳೂರು ಗ್ರಾಮಾಂತರ: ಹತ್ತು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ರಾಗಿ ಸಲು ನೆಲಕಚ್ಚಿದೆ. ರಾಗಿ ಕೊಯ್ಲಿಗೆ ಮುನ್ನವೇ ಮೊಳಕೆಯೊಡೆಯಲಾರಂಭಿಸಿದ್ದು ಆತಂಕ ಎದುರಾಗಿದೆ.

ಎರಡು ದಿನದ ಹಿಂದೆ ಮಳೆ ಪ್ರಮಾಣ ಕಡಿಮೆಯಾಗಿ ಬಿಸಿಲು ಕಾಣಿಸಿಕೊಂಡು ನಿಟ್ಟ್ಟುಸಿರು ಬಿಟ್ಟಿದ್ದ ರೈತರಿಗೆ ಭಾನುವಾರ ಹಾಗೂ ಸೋಮವಾರ ಸುರಿದ ಭಾರಿ ಮಳೆ ಆಘಾತ ನೀಡಿದೆ. ಅದರಲ್ಲೂ ಸೋಮವಾರ ಇಡೀ ರಾತ್ರಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದ್ದು, ರಾಗಿ ಹೊಲಗಳಲ್ಲಿ ಮಂಡಿಯುದ್ದ ನೀರು ನಿಂತಿದೆ. ಹಲವು ಕಡೆಗಳಲ್ಲಿ ರಾಗಿ ಪೈರು ಕೊಳೆಯಲಾರಂಭಿಸಿದ್ದು, ರೈತರನ್ನು ಕಂಗೆಡೆಸಿದೆ.

ಉತ್ತಮ ಮಳೆಯಿಂದ ಸಮೃದ್ಧ ಬೆಳೆ ಕಂಡಿದ್ದ ರೈತರು ಈ ಬಾರಿಯೂ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದರು. ಕರೊನಾ ಹೊಡೆತದ ನಡುವೆಯೂ ಸರ್ಕಾರದ ಬೆಂಬಲ ಬೆಲೆಯಿಂದಾಗಿ ರೈತರ ಬದುಕು ಹಸನಾಗಿತ್ತು. ಅದೇ ಉತ್ಸಾಹದಲ್ಲಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚುವರಿಯಾಗಿ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶಗಳಲ್ಲಿ ರಾಗಿ ಬೆಳೆಯಲಾಗಿದ್ದು, ಅಕಾಲಿಕ ಮಳೆ ರೈತರ ಉತ್ಸಾಹಕ್ಕೆ ತಣ್ಣಿರೆರಚಿದೆ.

ಶೇ.50 ನಷ್ಟದ ಭೀತಿ: ಜಿಲ್ಲೆಯಲ್ಲಿ ಈಗಾಗಲೇ ಶೇ.50 ರಾಗಿ ಕೊಯ್ಲಿಗೆ ಬಂದಿದೆ. ಜಡಿ ಮಳೆಯಿಂದಾಗಿ ಕೊಯ್ಲು ಸಾಧ್ಯವಾಗುತ್ತಿಲ್ಲ. ಮಳೆ ಹೀಗೆ ಮುಂದುವರಿದರೆ ಭಾರಿ ನಷ್ಟ ಎದುರಾಗಲಿದೆ.

ಕೂಲಿ ದುಬಾರಿ: ರಾಗಿ ಒಕ್ಕಣೆ ಜಿಲ್ಲಾಡಳಿತದಿಂದ ಯಂತ್ರಗಳು ಸಿದ್ಧವಾಗಿವೆ. ಅಲ್ಲದೆ ಖಾಸಗಿ ಒಕ್ಕಣೆ ಯಂತ್ರಗಳು ಜಮೀನುಗಳ ಕಡೆ ಮುಖಮಾಡಿವೆ. ಆದರೆ ಇದೆಲ್ಲದಕ್ಕೂ ಮಳೆ ಅಡ್ಡಿಯಾಗಿದೆ. ಇದರಿಂದ ಅನಿವಾರ್ಯವಾಗಿ ಕೂಲಿ ಕಾರ್ಮಿಕರನ್ನು ಅವಲಂಬಿಸಬೇಕಾಗಿದೆ. ಈಗ ಕೂಲಿ ಕಾರ್ಮಿಕರ ದರವೂ ದುಬಾರಿಯಾಗಿದ್ದು ರೈತರ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.

ಅಧಿಕಾರಿಗಳ ಪರಿಶೀಲನೆ: ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಮಳೆಯಿಂದ ರಾಗಿ ಫಸಲು ನೆಲಕಚ್ಚುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಮಟ್ಟದ ಅಧಿಕಾರಿಗಳು ಪರಿಶೀಲನೆ ಆರಂಭಿಸಿದ್ದಾರೆ. ಬೆಳೆ ನಷ್ಟದ ಬಗ್ಗೆ ವರದಿ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭರ್ಜರಿ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಬೆಳೆನಷ್ಟ ಪರಿಹಾರಕ್ಕೆ ಎದುರು ನೋಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ಕಟಾವಿಗೆ ಸಿದ್ಧವಾಗಿರುವ ರಾಗಿ ಅಧಿಕ ತೇವಾಂಶದಿಂದ ಹಾಳಾಗುತ್ತಿದೆ. ಈ ಬಗ್ಗೆ ಈಗಾಗಲೇ ಅಧಿಕಾರಿಗಳ ತಂಡ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಸ್ಥಳ ಪರಿಶೀಲಿಸಿದ್ದು, ಬೆಳೆ ನಷ್ಟದ ವರದಿ ಸಿದ್ಧಪಡಿಸಲಾಗುತ್ತಿದೆ. ಜಯಸ್ವಾಮಿ, ಜಂಟಿ ನಿರ್ದೇಶಕ ಕೃಷಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net