

ಚಿತ್ರದುರ್ಗ: ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ರಾಗಿ ಖರೀದಿಗೆ ಜಿಲ್ಲೆಯಲ್ಲಿ ರೈತರ ನೋಂದಣಿ ಕಾರ್ಯ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಹೇಳಿದರು.
ರಾಗಿ ಖರೀದಿ ಕೇಂದ್ರ ಪ್ರಾರಂಭ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯಲ್ಲಿ ಮಾತನಾಡಿ, ಫ್ರೂಟ್ಸ್ ತಂತ್ರಾಂಶದಲ್ಲಿರುವ ಬೆಳೆ ತಿದ್ದುಪಡಿಗೆ ಅವಕಾಶವಿಲ್ಲ. ಅಕ್ರಮವಾಗಿ ತಿದ್ದಿದರೆ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಿ, ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಕಳೆದ ಬಾರಿ ಈ ತಂತ್ರಾಂಶದಲ್ಲಿ ಬೆಳೆ ತಿದ್ದುಪಡಿ ಕಂಡುಬಂದಿದೆ. ಆದ್ದರಿಂದ ಈ ಬಾರಿ ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ಬೆಳೆ ವಿವರ ಪರಿಶೀಲಿಸಲಾಗುವುದು. ತಿದ್ದುಪಡಿ ಕಂಡುಬಂದರೆ, ಯಾರ ಲಾಗಿನ್‌ನಿಂದ ಆಗಿದೆ ಎಂಬುದನ್ನು ಗುರುತಿಸಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ರಾಗಿ ಪ್ರತಿ ಕ್ವಿಂಟಾಲ್‌ಗೆ ಸರ್ಕಾರ 3846 ರೂ. ಬೆಂಬಲ ಬೆಲೆ ಘೋಷಿಸಿದೆ. ಸಣ್ಣ ಮತ್ತು ಅತೀ ಸಣ್ಣ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಖರೀದಿಗೆ ಅವಕಾಶವಿದೆ. ಕಳೆದ ವರ್ಷ ಖರೀದಿ ಸಂದರ್ಭದಲ್ಲಿ ಎದುರಾದ ಸಮಸ್ಯೆಗಳು ಮರುಕಳಿಸದಂತೆ ಮುಂಜಾಗ್ರತೆ ವಹಿಸಲಾಗುವುದು. ನೋಂದಣಿ ವೇಳೆ, ಕೇಂದ್ರಗಳಿಗೆ ರಾಗಿ ತರುವ ದಿನಾಂಕ ಹಾಗೂ ಸಮಯ ನಮೂದಿಸಿ ಟೋಕನ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಹೊಸದುರ್ಗ-2, ಶ್ರೀರಾಂಪುರ-2, ಚಿತ್ರದುರ್ಗ-1, ಹೊಳಲ್ಕೆರೆ ತಾಲೂಕು ಚಿಕ್ಕಜಾಜೂರಿನಲ್ಲಿ 1 ಸೇರಿ ಜಿಲ್ಲೆಯಲ್ಲಿ 6 ಖರೀದಿ ಕೇಂದ್ರಗಳನ್ನು ಎಪಿಎಂಸಿಗಳಲ್ಲಿ ಪ್ರಾರಂಭಿಸಲಾಗುವುದು. ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಖರೀದಿ ಏಜೆನ್ಸಿಯಾಗಿದೆ ಎಂದರು.
ಕಳೆದ ಬಾರಿ ರಾಗಿ ಮಾರಾಟ ಮಾಡಿರುವ 484ಕ್ಕೂ ಹೆಚ್ಚು ರೈತರಿಗೆ ಕೊಡಬೇಕಿರುವ ಅಂದಾಜು 1.28 ಕೋಟಿ ರೂ.ಬಾಕಿಯನ್ನು ವಾರದೊಳಗೆ ಪಾವತಿಸಲಾಗುವುದು ಎಂದರು. ಕೇಂದ್ರಗಳ ಬಳಿ ಮಾಹಿತಿ ಫಲಕ ಅಳವಡಿಸಬೇಕು. ಕುಡಿವ ನೀರು, ಬೆಳಕಿನ ವ್ಯವಸ್ಥೆ ಇರ ಬೇಕು. ರಾಗಿ ಗುಣಮಟ್ಟ ಪರೀಕ್ಷೆಗೆ ಪ್ರತಿ ಕೇಂದ್ರಕ್ಕೆ ಅರ್ಹ ಗ್ರೇಡರ್ ನೇಮಿಸಬೇಕು, ವೇಬ್ರಿಡ್ಜ್‌ಗಳನ್ನು ದೃಢೀಕರಿಸಿರ ಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾ ಕಾರ್ಯಪಡೆ ಸಮಿತಿ ಸಭೆ ಆರಂಭಕ್ಕೂ ಮುನ್ನ, ರೈತ ಮುಖಂಡರಾದ ರಘು, ಸತೀಶ್, ವೇದಮೂರ್ತಿ ಅವರು ರೈತರಿಗೆ ಕಳೆದ ವರ್ಷದ ಬಾಕಿ ಹಣ ಪಾವತಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್‌ಮೀನಾ ಮಾತನಾಡಿ, ಖರೀದಿ ಕೇಂದ್ರ ಬಳಿ ಪೊಲೀಸ್ ಸಿಬ್ಬಂದಿ ಗಸ್ತಿಗೆ ವ್ಯವಸ್ಥೆ ಮಾಡಲಾಗುವುದು ಎಂದರು.
ಎಡಿಸಿ ಬಿ.ಟಿ.ಕುಮಾರಸ್ವಾಮಿ, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್ ಚೌಧರಿ, ಎಪಿಎಂಸಿ ಸಹಾಯಕ ಕಾರ‌್ಯದರ್ಶಿ ವಾಣಿಶ್ರೀ ಮತ್ತಿತರರು ಇದ್ದರು.
*ಕೋಟ್
ಜಿಲ್ಲೆಯಲ್ಲಿ ಕಳೆದ ಬಾರಿ 74,135 ಟನ್ ರಾಗಿ ಬೆಳೆಯಲಾಗಿತ್ತು. ಹೊಸದುರ್ಗ ತಾಲೂಕು ಒಂದರಲ್ಲೇ 47,540 ಟನ್ ರಾಗಿ ಉತ್ಪಾದನೆಯಾಗಿತ್ತು. ಬೆಂಬಲ ಬೆಲೆ ಯೋಜನೆಯಡಿ ಕಳೆದ ವರ್ಷ 2.17 ಲಕ್ಷ ಕ್ವಿಂಟಾಲ್ ರಾಗಿ ಖರೀದಿಸಲಾಗಿತ್ತು. ಈ ಬಾರಿ ಮಳೆ ಕೊರತೆಯಾಗಿದೆ. 18,285 ಟನ್ ರಾಗಿ ಉತ್ಪಾದನೆ ನಿರೀಕ್ಷೆ ಇದೆ. ಕಳೆದ ಬಾರಿ ಇದ್ದ 4 ಖರೀದಿ ಕೇಂದ್ರಗಳ ಸಂಖ್ಯೆಯನ್ನು 6ಕ್ಕೆ ಹೆಚ್ಚಿಸಲಾಗಿದೆ. ಬಯೋಮೆಟ್ರಿಕ್ ಆಧಾರದಲ್ಲಿ ನೋಂದಾಯಿಸಲಾಗುವುದು.
ಮಧುಸೂಧನ್, ಜಂಟಿ ನಿರ್ದೇಶಕ, ಆಹಾರ ಇಲಾಖೆ