ರಾಗಿ ಖರೀದಿಗೆ ಜ.1ರಿಂದ ನೋಂದಣಿ ; ಬೆಂಬಲ ಬೆಲೆಯಲ್ಲಿ ಮಾ.31ರವರೆಗೆ ಖರೀದಿ ; ರೈತನಿಂದ ಗರಿಷ್ಠ 20 ಕ್ವಿಂಟಾಲ್ ಮಿತಿ

DSC_3154
Published on

ತುಮಕೂರು : ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲು ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದ್ದು 2022 ಜ.1ರಿಂದಲೇ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಖರೀದಿ ಪ್ರಕ್ರಿಯೆ ಮಾ.31ರ ವರೆಗೆ ನಡೆಯಲಿದೆ.

ಖರೀದಿ ಕೇಂದ್ರ ಆರಂಭಿಸುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಶುಕ್ರವಾರ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿದ್ದು, ಅಗತ್ಯ ದಾಖಲೆಗಳೊಂದಿಗೆ ನೋಂದಣಿ ಪ್ರಕ್ರಿಯೆ ಆರಂಭಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಆಯಾ ಖರೀದಿ ಕೇಂದ್ರದಲ್ಲಿಯೇ ಆನ್‌ಲೈನ್ ಮೂಲಕ ರೈತರು ನೋಂದಣಿ ಮಾಡಿಕೊಳ್ಳಬೇಕಿದೆ. ಕೃಷಿ ಇಲಾಖೆ ನೀಡಿರುವ ೞಊ್ಕಖಿಐಖ ಐಈೞ ಹಾಜರುಪಡಿಸಿ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ. ಸರ್ಕಾರ ನಿಗದಿಪಡಿಸಿರುವ ಮಾನದಂಡ ಅನುಸರಿಸಿ ಎಫ್‌ಎಕ್ಯೂ ಗುಣಮಟ್ಟದ ರಾಗಿ ಖರೀದಿ ಮಾಡಬೇಕು. ಕಳಪೆ ರಾಗಿ ಖರೀದಿಯಾದರೆ ಸಂಬಂಧಿಸಿದ ಅಧಿಕಾರಿ ಮತ್ತು ಕೃಷಿ ಇಲಾಖೆ ಗ್ರೇಡರ್‌ಗಳನ್ನು ಹೊಣೆಯಾಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸರ್ಕಾರ ನಿಗದಿಪಡಿಸಿದ ಪ್ರಮಾಣ ಮೀರಿ ಹೆಚ್ಚುವರಿಯಾಗಿ ರಾಗಿ ಖರೀದಿಸುವಂತಿಲ್ಲ, ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಹಾಗೂ ನೋಂದಣಿ ಪ್ರಕ್ರಿಯೆಯಲ್ಲಿ ಬೋಗಸ್ ಗ್ರೇಡಿಂಗ್, ಮತ್ತಿತರ ಲೋಪವೆಸಗುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿ ಎಚ್ಚರಿಕೆಯಿಂದ ರಾಗಿ ಖರೀದಿ ಮತ್ತು ನೋಂದಣಿ ಪ್ರಕ್ರಿಯೆ ನಡೆಸಬೇಕು ಎಂದರು.

ಪ್ರತಿ ರಾಗಿ ಖರೀದಿ ಕೇಂದ್ರದಲ್ಲಿಯೂ ಸಿಬ್ಬಂದಿ ಮತ್ತು ಡಾಟಾ ಎಂಟ್ರಿ ಆಪರೇಟರ್ ಒದಗಿಸಲಾಗುತ್ತಿದೆ, ತಿಪಟೂರು ಮತ್ತು ಕುಣಿಗಲ್ ತಾಲೂಕುಗಳಲ್ಲಿ ಖರೀದಿ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದ್ದು ಹೆಚ್ಚುವರಿ ಸಿಬ್ಬಂದಿ ಹಾಗೂ ನುರಿತ ಗ್ರೇಡರ್‌ಗಳನ್ನು ನೇಮಿಸಬೇಕಿದೆ. ಖರೀದಿ ಕೇಂದ್ರಗಳಲ್ಲಿ ರೈತರಿಗೆ ಅಗತ್ಯವಾದ ಮೂಲಸೌಕರ್ಯ ಒದಗಿಸಲು ಜಿಲ್ಲಾಡಳಿತ ಎಪಿಎಂಸಿಗಳಿಗೆ ಸೂಚಿಸಿದೆ.

ಸಮಸ್ಯೆ ಮರುಕಳಿಸದಿರಲಿ : ಜಿಲ್ಲೆಯಲ್ಲಿ ಕಳೆದ 2020-21ನೇ ಸಾಲಿನಲ್ಲಿ 8.32ಕೋಟಿ ಮೆ.ಟನ್ ರಾಗಿ ಖರೀದಿಯಾಗಿದ್ದು, ಈ ವರ್ಷದಲ್ಲಿಯೂ ಖರೀದಿ ಕೇಂದ್ರಕ್ಕೆ ಹೆಚ್ಚು ರಾಗಿ ಬರುವ ಸಾಧ್ಯತೆಯಿದ್ದು, ದಾಸ್ತಾನು ಸಂಗ್ರಹಿಸಲು ಅಗತ್ಯ ಗೋದಾಮು ಕಾಯ್ದಿರಿಸಬೇಕು. ಕಳೆದ ವರ್ಷ ಎದುರಿಸಿದ ಸಮಸ್ಯೆಗಳು ಮರುಕಳಿಸದಂತೆ ಜಾಗ್ರತೆ ವಹಿಸಬೇಕಿದೆ.

ರಾಗಿ ಖರೀದಿ ಕೇಂದ್ರಗಳನ್ನು ಎಪಿಎಂಸಿ ಆವರಣಗಳಲ್ಲಿ ತೆರೆಯಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ, ಈ ಖರೀದಿ ಕೇಂದ್ರದಲ್ಲಿ ಕನಿಷ್ಠ 1000 ದಿಂದ 2000 ಕ್ವಿಂಟಾಲ್ ದಾಸ್ತಾನು ಮಾಡಿಕೊಳ್ಳುವ ಸಾಮರ್ಥ್ಯವಿರುವ ಸ್ಥಳ ಗುರುತಿಸಿ ಅಲ್ಲಿಯೇ ಖರೀದಿ ಕೇಂದ್ರ ಆರಂಭಕ್ಕೆ ಸಿದ್ಧತೆ ನಡೆಸಲಾಗಿದೆ.

ಕುಣಿಗಲ್, ತಿಪಟೂರಿನಲ್ಲಿಯೂ ಖರೀದಿ ಕೇಂದ್ರ! : ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಕುಣಿಗಲ್, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಮಧುಗಿರಿ, ತುಮಕೂರು, ಶಿರಾ ತಾಲೂಕು ಸೇರಿ ಹುಳಿಯಾರು ಪಟ್ಟಣದಲ್ಲಿ ರಾಗಿ ಖರೀದಿ ಕೇಂದ್ರ ತೆರೆಯಲಾಗಿತ್ತು. ಪ್ರಸಕ್ತ ವರ್ಷದಿಂದ ತಿಪಟೂರು ಮತ್ತು ಕುಣಿಗಲ್ ತಾಲೂಕಿನಲ್ಲಿ ಹೆಚ್ಚುವರಿಯಾಗಿ ತಲಾ 1 ಕೇಂದ್ರ ತೆರೆಯಲಾಗಿದೆ.

ಮಧ್ಯವರ್ತಿಗಳಿಗೆ ಕಡಿವಾಣ : ಮಧ್ಯವರ್ತಿಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ರೈತರಿಂದ ಖರೀದಿಸುವ ರಾಗಿಯ ಮಿತಿಯನ್ನು ಗರಿಷ್ಠ 20 ಕ್ವಿಂಟಾಲ್‌ಗೆ ಮಿತಿಗೊಳಿಸಿದ್ದು ಎಕರೆಗೆ 10 ಕ್ವಿಂಟಾಲ್ ಮಾರಲು ಅವಕಾಶವಿದೆ. ಸರ್ಕಾರದಿಂದ ಪ್ರತಿ ಕ್ವಿಂಟಾಲ್ ರಾಗಿಗೆ 3377ರೂ. ಖರೀದಿ ದರ ನಿಗದಿಪಡಿಸಲಾಗಿದೆ. ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಠ 20 ಕ್ವಿಂಟಾಲ್ ಮಾತ್ರ ರಾಗಿ ಖರೀದಿಸಲಾಗುತ್ತಿದೆ. ಇದರಿಂದ ಹೆಚ್ಚು ರಾಗಿ ಬೆಳೆದಿರುವ ರೈತರಿಗೆ ಅನನುಕೂಲವಾಗಿದ್ದು ಸರ್ಕಾರ ಮಧ್ಯವರ್ತಿಗಳಿಗೆ ಕಡಿವಾಣ ಹಾಕುವ ಸಲುವಾಗಿಯೇ ಈ ಬದಲಾವಣೆ ಮಾಡಿದೆ ಎನ್ನಲಾಗಿದೆ.

ರೈತರಿಗೆ ತೊಂದರೆಯಾಗದಂತೆ ಖರೀದಿ ಕೇಂದ್ರದಲ್ಲಿ ರಾಗಿ ಖರೀದಿಸಲು ಆಯಾ ತಾಲೂಕು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಎಪಿಎಂಸಿ, ಆಹಾರ, ಕಂದಾಯ, ಕೃಷಿ ಇಲಾಖೆ ಅಧಿಕಾರಿ ಒಳಗೊಂಡ ತಾಲೂಕು ಮಟ್ಟದ ಸಮಿತಿ ರಚಿಸಲಾಗಿದೆ. ಸಮಿತಿ ರೈತರ ನೋಂದಣಿ ಕೇಂದ್ರ ಮತ್ತು ರಾಗಿ ಕೇಂದ್ರಗಳಿಗೆ ಆಗಿಂದಾಗ್ಗೆ ಭೇಟಿ ನೀಡಿ ಖರೀದಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯುವಂತೆ ಮೇಲ್ವಿಚಾರಣೆ ನಡೆಸಬೇಕು. ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net