

ದೊಡ್ಡಬಳ್ಳಾಪುರ: ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ಇರುವ ಎಕರೆಗೆ ಗರಿಷ್ಠ 20 ಕ್ವಿಂಟಾಲ್ ಮಿತಿಯನ್ನು ತಕ್ಷಣವೇ ತೆಗೆದು ಹಾಕಬೇಕು. ಮೊದಲಿನಂತೆ ಗರಿಷ್ಠ 50 ಕ್ವಿಂಟಾಲ್ ಖರೀದಿ ಮಿತಿ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಶಾಸಕ ಟಿ. ವೆಂಕೆಟರಮಣಯ್ಯ ಅವರ ನೇತೃತ್ವದಲ್ಲಿ ನಗರದ ಎಪಿಎಂಸಿ ಆವರಣದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ರಾಗಿ ಖರೀದಿ ಕೇಂದ್ರದ ಎದುರು ರಾಜ್ಯ ರೈತ ಸಂಘ ಮಂಗಳವಾರ ಪ್ರತಿಭಟನೆ ನಡೆಸಿತು.
ಯಾವುದೇ ಮಿತಿ ವಿಧಿಸದೆ ಸರ್ಕಾರ ಕೂಡಲೇ ರಾಗಿ ಖರೀದಿ ಮಾಡಬೇಕು. ಒಮ್ಮೆ ನೋಂದಣಿ ಮಾಡಿಸಿದ ನಂತರ ತಂತ್ರಾಂಶದಲ್ಲಿ ತಿದ್ದುಪಡಿ ಸಾಧ್ಯವಿಲ್ಲ. ಆದ್ದರಿಂದ, ಈ ಪ್ರಕ್ರಿಯೆ ಆರಂಭಿಸುವ ಮುನ್ನವೇ ಮಿತಿ ತೆಗೆದುಹಾಕಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ನಾಗಸಂದ್ರ ಪ್ರಸನ್ನ ಆಗ್ರಹಿಸಿದರು.
ಶಾಸಕ ಟಿ. ವೆಂಕಟರಮಣಯ್ಯ ಮಾತನಾಡಿ, ನಮ್ಮದೇ ಸರ್ಕಾರ ಇದ್ದಿದ್ದರೆ ಈ ವೇಳೆಗೆ ಎಲ್ಲ ಸಮಸ್ಯೆ ಬಗೆಹರಿದಿರುತ್ತಿತ್ತು. ಈ ವಿಷಯವಾಗಿ ಬಿಜೆಪಿ ಸರ್ಕಾರದ ಗಮನ ಸೆಳೆಯಲಾಗಿದೆ. ಸಚಿವ ಉಮೇಶ್ ಕತ್ತಿ ಅವರ ಜತೆ ಮಾತನಾಡುತ್ತೇನೆ ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
ಅವೈಜ್ಞಾನಿಕ ನಿರ್ಧಾರ: ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಬಚ್ಚಹಳ್ಳಿ ಸತೀಶ್ ಮಾತನಾಡಿ, ಈ ಬಾರಿ ಪ್ರತಿ ಕ್ವಿಂಟಾಲ್‌ಗೆ 3,377 ರೂ. ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲಾಗುತ್ತಿದೆ. ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಠ 20 ಕ್ವಿಂಟಾಲ್ ಮಿತಿ ನಿಗದಿಪಡಿಸಿರುವುದು ಅವೈಜ್ಞಾನಿಕ ಕ್ರಮ. ಸರ್ಕಾರದ ಆದೇಶದಂತೆ ಇತ್ತೀಚಿನ ವರ್ಷಗಳಲ್ಲಿ ನೀಲಗಿರಿ ಮರಗಳನ್ನು ತೆರವು ಮಾಡಿರುವ ರೈತರು, ಆ ಪ್ರದೇಶದಲ್ಲಿ ರಾಗಿ ಬೆಳೆದಿದ್ದಾರೆ. ಈಗ ಅದನ್ನು ಖರೀದಿಸದಿದ್ದರೆ ಹೇಗೆ? ಹೆಚ್ಚು ರಾಗಿ ಬೆಳೆದ ರೈತರು ಅನಿವಾರ್ಯವಾಗಿ ಮಧ್ಯವರ್ತಿಗಳು ನೀಡುವ ಬೆಲೆಗೆ ಬೆಳೆ ಮಾರುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಮೋಹನಕುಮಾರಿ, ಈ ವಿಷಯವನ್ನು ಗಮನಕ್ಕೆ ತಂದು ರೈತರಿಗೆ ಸಹಕರಿಸುವ ಭರವಸೆ ನೀಡಿದರು. ಕೃಷಿಕ ಸಮಾಜದ ಉಪಾಧ್ಯಕ್ಷ ಜಯರಾಮಣ್ಣ, ರೈತ ಸಂಘದ ತಾಲೂಕು ಅಧ್ಯಕ್ಷ ಹನುಮೇಗೌಡ, ಮುಖಂಡರಾದ ಹರೀಶ್, ಶಿರವಾರ ರವಿ, ಹೆಗ್ಗಡಿಹಳ್ಳಿ ಮುನಿನಾರಾಯಣಪ್ಪ, ಮುಖಂಡ ವಸಂತ್‌ಕುಮಾರ್ ಮತ್ತಿತರರು ಇದ್ದರು.