ರಾಗಿ ಖರೀದಿ ನೋಂದಣಿ ಲೋಪ ಸರಿಪಡಿಸಿ

28arsph1ep
Published on

ಅರಸೀಕೆರೆ: ಕಂದಾಯ ಇಲಾಖೆಯ ಕೆಲ ಅಧಿಕಾರಿಗಳ ಜಾಣ ನಡೆಯಿಂದಾಗಿ ಸಣ್ಣ ಹಿಡುವಳಿದಾರರಿಗೆ ನಫೆಡ್ ಖರೀದಿ ಕೇಂದ್ರದಲ್ಲಿ ಹೆಸರು ನೋಂದಣಿಗೆ ಅವಕಾಶ ದೊರೆಯದಂತಾಗಿದ್ದು, ಲೋಪ ಸರಿಪಡಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ಮಂಗಳವಾರ ಸಂಜೆ ತಹಸೀಲ್ದಾರ್ ವಿಭಾ ವಿ.ರಾಥೋಡ್ ಅವರಿಗೆ ಮನವಿ ಸಲ್ಲಿಸಿದರು.


ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಿ.ಸಿ.ಗೋವರ್ಧನ್ ಮಾತನಾಡಿ, ಆಧುನಿಕ ತಂತ್ರಜ್ಞಾನದ ಬಳಕೆ ಹೆಸರಿನಲ್ಲಿ ಜಮೀನಿನ ದಾಖಲೆಗಳನ್ನು ಮನಬಂದಂತೆ ತಿರುಚಲಾಗಿದೆ. ಖುಷ್ಕಿ, ಒಣ ಭೂಮಿಯನ್ನು(ಬಾಗಾಯ್ತು) ತೋಟವೆಂದು ತೋರಿಸಲಾಗಿದೆ. ಇದರಿಂದ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನಫೆಡ್ ಮೂಲಕ ಬೆಂಬಲ ಬೆಲೆಯಲ್ಲಿ ರೈತರು ಬೆಳೆದ ರಾಗಿ ದಾಸ್ತಾನು, ಮಾರಾಟ ಮಾಡಲು ಸಾಧ್ಯವಿಲ್ಲದಂತಾಗಿದೆ. ವಾಸ್ತವ ಮನಗಂಡು ತಕ್ಷಣವೇ ಲೋಪ ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು.


ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಪದ್ಮಾ ಮಾತನಾಡಿ, ಸಣ್ಣ ಹಾಗೂ ದೊಡ್ಡ ಹಿಡುವಳಿ ಎನ್ನುವ ತಾರತಮ್ಯ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ. ಸರ್ಕಾರದಿಂದ ತೆರೆಯಲಾಗುತ್ತಿರುವ ಖರೀದಿ ಕೇಂದ್ರಗಳ ಮೂಲಕ ರಾಗಿ ಖರೀದಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ನಗರಸಭೆ ಸದಸ್ಯ ವೆಂಕಟಮುನಿ, ಮಾಜಿ ಸದಸ್ಯ ಶ್ರೀನಿವಾಸ್, ಮುಖಂಡರಾದ ಬಿ.ಜಿ.ನಿರಂಜನ್, ಜಗದೀಶ್, ಗಂಜಿಗೆರೆ ಮಹೇಶ್, ಕಿರಣ್ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net