ರಾಗಿ ಕೊಯ್ಲಿಗೆ ಲಗ್ಗೆಯಿಟ್ಟ ಯಂತ್ರಗಳು ; ಮನಸೋಇಚ್ಛೆ ದರ ನಿಗದಿ ; ಜಿಲ್ಲಾಡಳಿತದ ಮಧ್ಯಪ್ರವೇಶಕ್ಕೆ ಮನವಿ

02TMK_Raagi_Yantra (1)
Published on

ತುಮಕೂರು : ಸತತ ಮಳೆಯಿಂದ ಫಸಲಿಗೆ ಬಂದಿರುವ ರಾಗಿಕೊಯ್ಲು ತಡವಾಗಿದ್ದು, ಬೆಳೆನಷ್ಟದ ಭಯ ರೈತರನ್ನು ಕಾಡಲಾರಂಭಿಸಿದೆ, ಕೂಲಿ ಆಳುಗಳ ಅಭಾವದಿಂದ ಯಂತ್ರಗಳಿಂದ ರಾಗಿ ಕೊಯ್ಲು ಅನಿವಾರ್ಯವಾಗಿದ್ದು, ರೈತರ ಅಸಹಾಯಕತೆಯನ್ನು ಲಾಭವಾಗಿಸಿಕೊಳ್ಳಲು ತಮಿಳುನಾಡು, ಆಂಧ್ರದಿಂದ ಸಾವಿರಾರು ಬೃಹತ್ ಯಂತ್ರಗಳು ಜಿಲ್ಲೆಗೆ ದಾಂಗುಡಿ ಇಟ್ಟಿವೆ.

ಜಿಲ್ಲೆಯಲ್ಲಿ ರಾಗಿಯೇ ಪ್ರಮುಖ ಬೆಳೆಯಾಗಿದ್ದು, 2 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಒಣಗಿ ನಿಂತಿದೆ. ಬೃಹತ್ ಯಂತ್ರಗಳು ಮನಸೋಇಚ್ಛೆ ದರ ನಿಗದಿ ಮಾಡಿದ್ದರೂ ನಿಯಂತ್ರಿಸಬೇಕಾದ ಜಿಲ್ಲಾಡಳಿತ ಮೌನವಾಗಿರುವುದು ರೈತರನ್ನು ಕಂಗಾಲಾಗಿಸಿದೆ. ಒಂದು ಗಂಟೆಗೆ 3 ಸಾವಿರ ರೂ. ನಿಗದಿ ಮಾಡಲಾಗಿದೆ, ಹೊಲದಲ್ಲಿ ಬೃಹತ್ ಯಂತ್ರಗಳು ಹೂತುಕೊಳ್ಳುತ್ತಿದ್ದು ಅದನ್ನು ತೆಗೆಸಲು ರೈತನೇ ಹಣ ಖರ್ಚು ಮಾಡಬೇಕಾಗಿರುವುದು ಮತ್ತಷ್ಟು ಹೊರೆಯಾಗಿದೆ.

ಹವಾಮಾನ ವೈಪರಿತ್ಯ, ಕೂಲಿ ಆಳುಗಳ ಅಭಾವದಿಂದ ಎಲ್ಲರೂ ಕಟಾವು ಮಾಡಲು ನೂತನ ಯಂತ್ರಗಳನ್ನು ಅವಲಂಬಿಸುವಂತಾಗಿದ್ದು, ರೈತರಿಂದ ಹಣ ಪೀಕುತ್ತಿದ್ದಾರೆ, ಹಳ್ಳಿಗಳಲ್ಲಿ ಮಧ್ಯವರ್ತಿಗಳು ಹುಟ್ಟಿಕೊಂಡಿದ್ದು ಮಾಲೀಕರಿಗೆ ಹಣ ಮಾಡಿಕೊಡುತ್ತಿದ್ದಾರೆ.

ಸತತವಾಗಿ ಸುರಿದ ಜಿಟಿಜಿಟಿ ಮಳೆ ಕೊಂಚ ಬಿಡುವು ಕೊಟ್ಟಿದ್ದು ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಗುಬ್ಬಿ, ಶಿರಾ ತಾಲೂಕುಗಳ ಬಹುತೇಕ ಹಳ್ಳಿಗಳ ರೈತರು ಏಕಕಾಲದಲ್ಲಿ ರಾಗಿ ಬೆಳೆ ಕೊಯ್ಲಿಗೆ ಸಿದ್ಧವಾಗಿದ್ದಾರೆ. ಹಳ್ಳಿಗಳಲ್ಲಿ ಕೂಲಿ ಮಾಡುವವರೇ ಇಲ್ಲವಾಗಿದ್ದು, ಕೂಡಲೇ ಜಿಲ್ಲಾಡಳಿತ ಯಂತ್ರಗಳಿಗೆ ನಿರ್ದಿಷ್ಟ ದರ ನಿಗದಿ ಮಾಡಬೇಕಿದೆ. ರಾಗಿ ಕೊಯ್ಲು ಕಟಾವಿಗೆ ಒಬ್ಬ ಕೂಲಿಕಾರನಿಗೆ ದಿನಕ್ಕೆ 500 ರೂ. ನೀಡಬೇಕಾಗಿದೆ. ಒಂದು ಎಕರೆ ಜಮೀನಿನಲ್ಲಿ ಕಟಾವು ಮಾಡಲು ಕನಿಷ್ಠ 10 ಜನರ ಅಗತ್ಯವಿದ್ದು 5 ಸಾವಿರ ರೂಪಾಯಿ ವೆಚ್ಚ ತಗುಲುತ್ತಿದೆ, ಬೇರೆ ಬೇರೆ ಊರುಗಳಿಂದ ಮುಂಗಡ ಹಣ ಕೊಟ್ಟು ಕೂಲಿಕಾರರನ್ನು ಕರೆಸಿಕೊಳ್ಳುವ ಸ್ಥಿತಿ ಎದುರಾಗಿರುವುದರಿಂದ ರೈತರು ತಂತ್ರಜ್ಞಾನದ ಮೊರೆಹೋಗಿದ್ದು ಹೊರರಾಜ್ಯದ ಮಾಲೀಕರಿಗೆ ಇದೇ ಬಂಡವಾಳವಾಗಿದೆ.

ದಾವಣಗೆರೆಯಲ್ಲಿ ದರ ನಿಗದಿ : 66245 ಹೆ. ಪ್ರದೇಶದಲ್ಲಿ ಭತ್ತ ಬೆಳೆದಿರುವ ದಾವಣಗೆರೆ ಜಿಲ್ಲೆಯಲ್ಲಿಯೂ ಇಂತಹುದೇ ಸಮಸ್ಯೆ ಎದುರಾಗಿದ್ದು, ಅಲ್ಲಿನ ಜಿಲ್ಲಾಧಿಕಾರಿಯೂ ಆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಬಾಡಿಗೆ ನಿಗದಿ ಮಾಡಿ ನ.25ರಂದು ಆದೇಶಿಸಿದ್ದಾರೆ. ಹೆಚ್ಚಿನ ದರ ಪಡೆದರೆ ಸ್ಥಳೀಯ ಕೃಷಿ ಅಧಿಕಾರಿಗಳಿಗೆ ದೂರು ನೀಡಲು ಅವಕಾಶ ನೀಡಲಾಗಿದ್ದು ರೈತರು ಕೊಂಚ ನಿರಾಳರಾಗಿದ್ದಾರೆ. ದಾವಣಗೆರೆಯಲ್ಲಿ ಭತ್ತ ಕೊಯ್ಯಲು ಪ್ರತಿ ಗಂಟೆಗೆ 1800ರಿಂದ 2250ರೂ. ನಿಗದಿ ಮಾಡಲಾಗಿದ್ದು ರೈತರು ಹಾಗೂ ಯಂತ್ರಗಳ ಮಾಲೀಕರಿಗೂ ಅನುಕೂಲವಾಗಿದೆ.

ನೆರೆ ಸಮಯದಲ್ಲಿ ಸಂಕಷ್ಟದಲ್ಲಿರುವ ರೈತರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ನನ್ನ ಗಮನಕ್ಕೂ ಬಂದಿದೆ, ಈ ಬಗ್ಗೆ ವರದಿ ನೀಡಲು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚಿಸಿದ್ದೇನೆ, ಕಾನೂನು ಚೌಕಟ್ಟಿನಲ್ಲಿ ರೈತರಿಗೆ ಅನುಕೂಲವಾಗುವ ನಿರ್ಧಾರ ಶೀಘ್ರದಲ್ಲಿಯೇ ತೆಗೆದುಕೊಳ್ಳಲಿದ್ದೇವೆ. ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ ರಾಗಿ ಕಟಾವು ಯಂತ್ರಗಳನ್ನು ಸ್ಥಳೀಯ ದಲ್ಲಾಳಿಗಳು ನಿಯಂತ್ರಿಸಲಾರಂಭಿಸಿದ್ದಾರೆ, ಮನಸ್ಸಿಗೆ ಬಂದಂತೆ ದರ ನಿಗದಿ ಮಾಡುತ್ತಿದ್ದರೂ ಜಿಲ್ಲಾಡಳಿತ ಜಾಣ ಮೌನವಹಿಸಿದೆ, ಹೊರರಾಜ್ಯದಿಂದ ಬಂದಿರುವ ಯಂತ್ರಗಳಿಗೆ ಕಡಿವಾಣ ಹಾಕಬೇಕು, ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವಂತೆ ನ್ಯಾಯವಾದ ದರ ಪಡೆಯಲು ಸೂಚಿಸಲು ಕಾರ್ಯಪಡೆ ರಚಿಸಬೇಕು. ಸುಂದರೇಶ್ ರೈತ, ದೊಡ್ಡಎಣ್ಣೆಗೆರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net