

ವಿಜಯಪುರ: ಕಿತ್ತು ಹೋದ ರಸ್ತೆಗಳು ಕೆಸರು ಗದ್ದೆಗಳಾಗಿವೆ. ಚರಂಡಿಗಳಲ್ಲಿ ಕೊಳಚೆನೀರು ನಿಂತು ದುರ್ವಾಸನೆ ಬೀರುತ್ತಿದೆ. ಕಸದರಾಶಿ ಕೊಳೆಯುತ್ತಿದ್ದು ದುರ್ನಾತ ಬೀರುತ್ತಿದೆ. ಈ ಎಲ್ಲ ದುರಾವಸ್ಥೆ ತಪ್ಪಿಸಿ, ನೆಮ್ಮದಿಯಾಗಿ ಬದುಕಲು ಅವಕಾಶ ಮಾಡಿಕೊಡುವಂತೆ ವಿಜಯಪುರದ 23ನೇ ವಾರ್ಡಿನ ರಹಮತ್ ನಗರದ ನಿವಾಸಿಗಳು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಬಡಾವಣೆಯಲ್ಲಿನ ಬಹುತೇಕ ಚರಂಡಿಗಳಲ್ಲಿ ಕಸ ತುಂಬಿಕೊಂಡಿದೆ. ಕೊಳಚೆ ಮುಂದಕ್ಕೆ ಹೋಗುತ್ತಿಲ್ಲ. ಮಳೆ ಬಂದರೆ ಚರಂಡಿಗಳಲ್ಲಿನ ಕೊಳಚೆ ಮನೆಗಳ ಒಳಗೆ ನುಗ್ಗುತ್ತಿದೆ. ಚರಂಡಿಗಳನ್ನು ಅವೈಜ್ಞಾನಿಕವಾಗಿ ವಿನ್ಯಾಸಗೊಳಿಸಿರುವುದು ಈ ಸಮಸ್ಯೆಗೆ ಕಾರಣ ಎಂದು ನಿವಾಸಿಗಳು ದೂರಿದ್ದಾರೆ.
ಖಾಸಗಿ ವ್ಯಕ್ತಿಗಳು ಬಡಾವಣೆಯ ಸುತ್ತಮುತ್ತ ನಿವೇಶನಗಳನ್ನು ಖರೀದಿಸಿದ್ದಾರೆ. ಆದರೆ, ಅಲ್ಲಿ ಯಾವುದೇ ಮ ನಿರ್ಮಿಸಿಲ್ಲ. ಈ ನಿವೇಶನದಲ್ಲಿ ಕಸ ತುಂಬಿಕೊಂಡಿದೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ನೆಮ್ಮದಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ಅಲವತ್ತುಕೊಂಡಿದ್ದಾರೆ.
ಸೊಳ್ಳೆ ಕಾಟದಿಂದಾಗಿ ಮಕ್ಕಳು ಮತ್ತು ವೃದ್ಧರು ಪದೇಪದೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಪೌರಕಾರ್ಮಿಕರು ಕಸ ತೆಗೆಯುತ್ತಿಲ್ಲ. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವಂತೆ ಮನವಿ ಮಾಡಿಕೊಂಡರೂ ಪುರಸಭೆ ಅಧಿಕಾರಿಗಳು ಇತ್ತಮ ಗಮನಹರಿಸುತ್ತಿಲ್ಲ ಎಂದು ದೂರಿದ್ದಾರೆ.
ಬಡಾವಣೆಯಲ್ಲಿರುವ ಖಾಸಗಿ ನಿವೇಶನಗಳನ್ನು ಸ್ವಚ್ಛಗೊಳಿಸಿಕೊಂಡು ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಅವುಗಳ ಮಾಲೀಕರಿಗೆ ಪುರಸಭೆ ಅಧಿಕಾರಿಗಳು ನೋಟಿಸ್ ಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದರು.
ಈ ಪ್ರದೇಶ ತೀರಾ ಹಿಂದುಳಿದಿದೆ. ಕುಡಿಯಲಿಕ್ಕೆ ನೀರು ಬರಲ್ಲ. ರಸ್ತೆಯಲ್ಲೆ ಶೌಚಗುಂಡಿ ನಿರ್ಮಿಸಲಾಗಿದೆ. ಕೊಳಾಯಿಗಳ ಬಳಿ ಕೊಳಚೆ ಗುಂಡಿಗಳಿವೆ. ನೀರು ಹಿಡಿಯಲಿಕ್ಕೂ ಸಾಧ್ಯವಾಗುತ್ತಿಲ್ಲ. ದ್ವಿಚಕ್ರ ವಾಹನಗಳು ಬಿಟ್ಟರೆ ಬೇರೆ ವಾಹನಗಳು ಓಡಾಡಲಿಕ್ಕೆ ರಸ್ತೆಯಲ್ಲಿ ಸಾಧ್ಯವಿಲ್ಲ. ಶ್ರೀನಿವಾಸಪ್ಪ, ಸ್ಥಳೀಯ ನಿವಾಸಿ ಕಂದಾಯ ವಿಭಾಗದಲ್ಲಿ ನಿವೇಶನ ಖರೀದಿಸಿರುವವರು ಅದನ್ನು ಸ್ವತಃ ಸ್ವಚ್ಛಗೊಳಿಸಿಕೊಳ್ಳಬೇಕು. ಒಂದು ವೇಳೆ ಸಾಧ್ಯವಿಲ್ಲವಾದರೆ, ಪುರಸಭೆಯಿಂದ ಅದನ್ನು ಸ್ವಚ್ಛಗೊಳಿಸಿ, ಅದಕ್ಕೆ ತಗಲುವ ವೆಚ್ಚವನ್ನು ನಿವೇಶನದ ಮಾಲೀಕರಿಂದ ಕಂದಾಯ ರೂಪದಲ್ಲಿ ವಸೂಲಿ ಮಾಡಲಾಗುವುದು. ರಸ್ತೆ ಹಾಗೂ ಚರಂಡಿ ಅವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಎ.ಬಿ.ಪ್ರದೀಪ್ ಕುಮಾರ್ ಪುರಸಭಾ ಮುಖ್ಯಾಧಿಕಾರಿ