

ನೆಲಮಂಗಲ: ಗ್ರಾಮೀಣ ಭಾಗದಲ್ಲಿ ಹದೆಗೆಟ್ಟಿರುವ ರಸ್ತೆಗಳನ್ನು ದುರಸ್ತಿ ಮಾಡಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ರಸ್ತೆಯಲ್ಲೇ ಜೋಳದ ಪೈರು ನೆಟ್ಟು ವಿನೂತನವಾಗಿ ಪ್ರತಿಭಟಿಸಿದರು.
ಬೂದಿಹಾಲ್ ಗ್ರಾಪಂ ವ್ಯಾಪ್ತಿಯ ಮಾಚೋನಾಯಕನಹಳ್ಳಿಯಿಂದ ನರಸಿಂಹಯ್ಯನಪಾಳ್ಯಕ್ಕೆ ಸಂಪರ್ಕ ಒದಗಿಸುವ ರಸ್ತೆಯಲ್ಲಿ ಸೋಮವಾರ ಜಮಾಯಿಸಿದ್ದ ಗ್ರಾಮಸ್ಥರು, ಕೆಸರುಗದ್ದೆಯಂತಿದ್ದ ರಸ್ತೆಯಲ್ಲಿ ಜೋಳ ಸಸಿ ನಾಟಿ ಮಾಡಿದರು.
ಕಳೆದೆರಡು ವರ್ಷಗಳಿಂದ ಮಳೆಗಾಲದಲ್ಲಿ ಈ ಸಮಸ್ಯೆ ಉಂಟಾಗುತ್ತಿದೆ. ಇದನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಸಮಸ್ಯೆ ಹಾಗೆಯೇ ಉಳಿದಿದೆ. ತಿಂಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಈ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಭಾರಿ ತೊಂದರೆಯಾಗುತ್ತಿದೆ. ದುರಸ್ತಿಗೊಳಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೆ, ಅವರಿಂದ ಬೇಜವಾಬ್ದಾರಿ ಉತ್ತರ ಬರುತ್ತಿದೆ. ಜನಪ್ರತಿನಿಧಿಗಳೂ ಸ್ಪಂದಿಸುತ್ತಿಲ್ಲ ಎಂದು ಬೇಸರಿಸಿದರು.
ಬೂದಿಹಾಲ್ ಗ್ರಾಮ ರಾ.ಹೆದ್ದಾರಿ 4ರಿಂದ ಕಾಚನಹಳ್ಳಿ, ಮಾಚೋನಾಯಕನಹಳ್ಳಿ ಸೇರಿ ನರಸಿಂಹಯ್ಯಪಾಳ್ಯದ ಮೂಲಕ ರಾಜ್ಯ ಹೆದ್ದಾರಿ 3ಕ್ಕೆ ಸಂಪರ್ಕ ಒದಗಿಸುತ್ತದೆ. ಅನೇಕ ಕಾರ್ಖಾನೆಗಳು, ಕಂಪನಿಗಳಿಗೆ ತೆರಳುವ ಕಾರ್ಮಿಕರು, ಡೇರಿಗೆ ಹಾಲು ಹಾಕುವ ರೈತರು ಇದೇ ರಸ್ತೆಯಲ್ಲಿ ತೆರಳಬೇಕಿದೆ. ಕೂಡಲೇ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ದೊಡ್ಡ ಹೋರಾಟ ಸಂಘಟಿಸಲಾಗುವುದು ಎಂದು ಪರಿಸರ ಕ್ರಾಂತಿ ವೇದಿಕೆ ಅಧ್ಯಕ್ಷ ಸಿ. ಹನುಮಂತರಾಜು ತಿಳಿಸಿದರು.