

ಯಲ್ಲಾಪುರ: ಹದಗೆಟ್ಟ ರಸ್ತೆ ದುರಸ್ತಿ ಮಾಡುವಂತೆ ಅನೇಕ ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡಿ ಬೇಸತ್ತ ತಾಲೂಕಿನ ಕುಂದರಗಿ ಗ್ರಾಪಂ ವ್ಯಾಪ್ತಿಯ ಕುರ್ಲೆಜಡ್ಡಿ ಗ್ರಾಮಸ್ಥರು ರಾಡಿ ರಸ್ತೆಯಲ್ಲಿ ಭತ್ತದ ಸಸಿ ನಾಟಿ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಕುಂದರಗಿ ಗ್ರಾಪಂ ವ್ಯಾಪ್ತಿಯ ಮಾವಿನಕಟ್ಟಾದಿಂದ 7 ಕಿಮೀ ದೂರದಲ್ಲಿರುವ ಕುರ್ಲೆಜಡ್ಡಿ ರಸ್ತೆ ಸುಮಾರು 5 ಕಿಮೀಯಷ್ಟು ಸಂಪೂರ್ಣ ರಾಡಿಯಿಂದ ಕೂಡಿದೆ. ಮಳೆಗಾಲದಲ್ಲಿ ವಾಹನಗಳನ್ನು ಚಲಾಯಿಸುವುದು ಬದಿಗಿರಲಿ, ನಡೆದು ಹೋಗುವುದು ಕಷ್ಟಸಾಧ್ಯ. ಕುರ್ಲೆಜಡ್ಡಿ ಹಾಗೂ ಸುತ್ತಮುತ್ತಲಿನ 50ಕ್ಕೂ ಹೆಚ್ಚು ಮಕ್ಕಳು ಶಾಲೆ-ಕಾಲೇಜಿಗೆ ಹೋಗಲು ಇದೇ ಮಾರ್ಗದಲ್ಲಿ ಬರಬೇಕು. ಗ್ರಾಮಸ್ಥರು ಪಡಿತರ, ಕಿರಾಣಿ ಹಾಗೂ ಇತರ ಸಾಮಗ್ರಿಗಳನ್ನು ತರಲು ಮಾವಿನಕಟ್ಟಾಗೆ ಹೋಗಲು ಇದೇ ದಾರಿಯನ್ನೇ ಅವಲಂಬಿಸಿದ್ದಾರೆ. ಯಾರಾದರೂ ಅನಾರೋಗ್ಯಕ್ಕೊಳಗಾದರೆ ಆಸ್ಪತ್ರೆಗೆ ಸಾಗಿಸುವುದು ತೀರಾ ಕಷ್ಟ. ರಾಡಿ ರಸ್ತೆಯಲ್ಲಿ ಕಂಬಳಿಯಲ್ಲಿ ಅವರನ್ನು ಕಟ್ಟಿಕೊಂಡೇ ಸಾಗಬೇಕು. ಬಾಡಿಗೆ ವಾಹನದವರು ಈ ರಸ್ತೆಯಲ್ಲಿ ಬರಲು ಹಿಂದೇಟು ಹಾಕುತ್ತಾರೆ.
ಸಮಸ್ಯೆ ಪರಿಹರಿಸುವ ಕುರಿತು ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಹಿಡಿದು ಸಚಿವರ ವರೆಗೂ ಗ್ರಾಮಸ್ಥರು ಮನವಿ ನೀಡಿದ್ದಾರೆ. ಗ್ರಾಮ ಪಂಚಾಯಿತಿಯವರು ಪ್ರತಿ ವರ್ಷ ಮಳೆಗಾಲಕ್ಕೂ ಮುನ್ನ ರಸ್ತೆಗೆ ಮಣ್ಣು ಹಾಕುವುದನ್ನು ಬೇರೇನೂ ಮಾಡುವುದಿಲ್ಲ.
ಸೇತುವೆ ಕಾಮಗಾರಿ ಅಪೂರ್ಣ: ಗ್ರಾಮದಲ್ಲಿನ ಹಳ್ಳಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾದ ಎರಡು ಸೇತುವೆ ಕಾಮಗಾರಿಗಳು ಅಪೂರ್ಣವಾಗಿದ್ದು, ಜನರ ಓಡಾಟಕ್ಕೆ ಸಮಸ್ಯೆಯಾಗಿದೆ. ಎರಡು ವರ್ಷಗಳಿಂದ ಕಾಮಗಾರಿ ನಿಂತಿದ್ದು, ಗ್ರಾಮಸ್ಥರು ಹಳ್ಳದಲ್ಲೇ ಓಡಾಡಬೇಕಾಗಿದೆ. ಈ ಬಾರಿ ಹಳ್ಳ ಸೇತುವೆಯ ಮಟ್ಟಕ್ಕೆ ಬಂದು, ಮುಂದೆ ಹರಿಯಲಾಗದೇ ಪಕ್ಕದ ಕೃಷಿ ಜಮೀನುಗಳಿಗೆ ನುಗ್ಗಿ ಅಪಾರ ಹಾನಿ ಉಂಟಾಗಿದೆ. ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂಬುದು ಗ್ರಾಮಸ್ಥರ ಅಳಲು.
ಸೇತುವೆ ಕಾಮಗಾರಿ ಅಪೂರ್ಣವಾಗಿದ್ದು, ರಸ್ತೆಯೂ ಸರಿಯಾಗಿಲ್ಲ. ಕೂಡಲೆ ರಸ್ತೆ ದುರಸ್ತಿಗೊಳಿಸಬೇಕು.ಡಾಂಬರೀಕರಣ ಅಥವಾ ಕಾಂಕ್ರೀಟ್ ರಸ್ತೆ ನಿರ್ವಿುಸಿ ಸಮಸ್ಯೆ ಪರಿಹರಿಸಬೇಕು. ಅಪೂರ್ಣವಾದ ಸೇತುವೆ ಕಾಮಗಾರಿ ಪೂರ್ಣವಾಗಬೇಕು.| ಪ್ರಭಾಕರ ಭಂಡಾರಿ ಗ್ರಾಮಸ್ಥ
ಕುರ್ಲೆಜಡ್ಡಿ ರಸ್ತೆಗೆ ಗ್ರಾಮ ಪಂಚಾಯಿತಿಯಿಂದ ಮಣ್ಣು ಹಾಕಿಕೊಟ್ಟಿದ್ದೇವೆ. ಗ್ರಾಪಂ ಮಟ್ಟದಲ್ಲಿ ಅದಕ್ಕಿಂತ ಹೆಚ್ಚಿನ ಕೆಲಸ ಮಾಡಲು ಅವಕಾಶವಿರುವುದಿಲ್ಲ. ಜಿಪಂ ಹಾಗೂ ಇತರ ದೊಡ್ಡ ಮೊತ್ತದ ಅನುದಾನದಿಂದ ಮಾತ್ರ ರಸ್ತೆ ಸಮರ್ಪಕವಾಗಿ ಮಾಡಲು ಸಾಧ್ಯ. ಗ್ರಾಮ ಪಂಚಾಯಿತಿಯಿಂದ ಜಿಪಂಗೆ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗುವುದು.| ರವಿ ಪಟಗಾರ ಕುಂದರಗಿ ಗ್ರಾಪಂ ಪಿಡಿಒ