ರಸ್ತೆಯಲ್ಲಿ ಗುಂಡಿಗಳದ್ದೇ ದರ್ಬಾರ್

26 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಳೆದ ತಿಂಗಳು ಸುರಿದ ಮಳೆಯಿಂದ ನಗರದ ಅನೇಕ ರಸ್ತೆಗಳಲ್ಲಿ ಬಾಯ್ತೆರೆದಿರುವುದು ಕಂಡು ಬರುತ್ತಿವೆ. ಇದಕ್ಕೆ ಇಲ್ಲಿನ ಕಲಘಟಗಿ ರಸ್ತೆ ಸಹ ಹೊರತಾಗಿಲ್ಲ. ಕೆಲ ತಿಂಗಳ ಹಿಂದಷ್ಟೇ ನಿರ್ಮಿಸಿದ್ದ ರಸ್ತೆಯ ಡಾಂಬರ್ ಒಂದೇ ಮಳೆಗೆ ಸಂಪೂರ್ಣ ಹಾಳಾಗಿರುವುದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ.
ನಗರದ ಪ್ರಮುಖ ರಸ್ತೆಗಳು, ಒಳರಸ್ತೆಗಳಲ್ಲಿ ಎಲ್ಲೆಂದರಲ್ಲಿ ಗುಂಡಿಗಳು ಕಾಣುತ್ತಿವೆ. ವಾಹನ ಸವಾರರು ಎದ್ದು ಬಿದ್ದು ಸಾಗಬೇಕಿದೆ. ಮಳೆಗಾಲದಲ್ಲಿ ಒಂದು ರೀತಿಯ ತೊಂದರೆ, ಯಾತನೆ ಅನುಭವಿಸಿದ ಜನ ಈಗ ತೆಗ್ಗು ಗುಂಡಿಗಳಿಂದ ರೋಸಿ ಹೋಗಿದ್ದಾರೆ.
ಮಳೆಗಾಲಕ್ಕೂ ಪೂರ್ವ ಇಲ್ಲಿನ ತೇಜಸ್ವಿನಗರ ರಸ್ತೆಯಲ್ಲಿನ ಸೇತುವೆ ರಸ್ತೆ ಡಾಂಬರೀಕರಣದ ಜತೆಗೆ ಉಳಿದ ರಸ್ತೆ ಸಹ ಮಾಡಲಾಗಿತ್ತು. ಆದರೆ ಜುಲೈನಲ್ಲಿ ಸುಮಾರು ಒಂದು ವಾರ ಕಾಲ ಸುರಿದ ಸತತ ಮಳೆಯಿಂದ ಡಾಂಬರ ಪೂರ್ಣ ಕಿತ್ತು ಹೋಗಿದೆ. ಹೀಗಾಗಿ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಈ ರಸ್ತೆ ಹು-ಧಾ ಬೈಪಾಸ್‌ಗೆ ತೆರಳುವ ಮಾರ್ಗವೂ ಆಗಿದೆ. ಹೀಗಾಗಿ ಈ ಮಾರ್ಗದಲ್ಲಿ ಭಾರೀ ಭಾರದ ವಾಹನಗಳ ಸಂಚಾರ ಹೆಚ್ಚಿದೆ. ಇದೇ ಕಾರಣಕ್ಕೆ ರಸ್ತೆ ಮಾಡಿದ ಕೆಲ ತಿಂಗಳಲ್ಲೇ ರಸ್ತೆ ಹಾಳಾಗುತ್ತಿದೆ ಎಂಬುದು ಒಂದೆಡೆಯಾದರೆ, ಸಂಬಂಧಪಟ್ಟ ಗುತ್ತಿಗೆದಾರ ಕಳಪೆ ಕಾಮಗಾರಿ ಮಾಡಿರುವುದೇ ಇಂತಹ ಸ್ಥಿತಿಗೆ ಕಾರಣ. ಇನ್ನು ಈ ಕಾಮಗಾರಿ ಮೇಲು ನಿಗಾ ವಹಿಸಬೇಕಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಹ ಗುಣಮಟ್ಟ ಪರಿಶೀಲನೆ ನಡೆಸಿಲ್ಲ ಎಂಬುದಕ್ಕೆ ಇದು ನಿದರ್ಶನವಾಗಿದೆ.
ತೆಗ್ಗು ಗುಂಡಿಗೆ ಬಿದ್ದು ಬೈಕ್, ಕಾರು ಚಲಿಸುವುದರಿಂದ ಸವಾರರು ತೀವ್ರ ಯಾತನೆ ಅನುಭವಿಸುತ್ತಿದ್ದಾರೆ. ಅದರಲ್ಲೂ ಬೈಕ್ ಸವಾರರು ಕೈ-ಕಾಲು ಮುರಿದುಕೊಳ್ಳುವ ಭಯದಲ್ಲೇ ಸಂಚರಿಸುವಂತಾಗಿದೆ. ಇನ್ನು ಮಳೆ ನಿಂತ ಬಳಿಕ ಗುಂಡಿಗಳಲ್ಲಿನ ರಾಡಿಯು ಬಿಸಿಲು ಬೀಳುತ್ತಲೆ ಒಣಗಿ ಧೂಳು ಹಾರುತ್ತಿದೆ. ಹಾಗಾಗಿ ವಾಹನಗಳು ಹಾಯ್ದು ಹೋಗುತ್ತಲೇ ಧೂಳು ಎಲ್ಲೆಡೆ ಆವರಿಸಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳ ಪರಿಶೀಲನೆ ಕಾರ್ಯ ನಡೆಸಿ, ಕೂಡಲೇ ರಸ್ತೆ ನಿರ್ಮಾಣ ಕಾರ್ಯ ನಡೆಸಬೇಕು. ಒಂದು ವೇಳೆ ಶಾಶ್ವತ ಪರಿಹಾರಕ್ಕೆ ವಿಳಂಬವಾದಲ್ಲಿ ತಾತ್ಕಾಲಿಕವಾಗಿ ಜಲ್ಲಿ, ಡಾಂಬರ್ ಅಥವಾ ಕಾಂಕ್ರೀಟ್ ಹಾಕಿ ಮುಚ್ಚುವ ಕಾರ್ಯ ಮಾಡಬೇಕು. ಇದರಿಂದ ತಾತ್ಕಾಲಿಕ ಪರಿಹಾರವಾದರೂ ಸಿಗಲಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net