ರಸ್ತೆಯ ಬದಿಯಲ್ಲಿ ವಾಹನಗಳ ನಿಲುಗಡೆ ಟ್ರಾಫಿಕ್ ಸಮಸ್ಯೆಗೆ ದೊಡ್ಡ ಕಾರಣ

ರಸ್ತೆಯ ಬದಿಯಲ್ಲಿ ವಾಹನಗಳ ನಿಲುಗಡೆ ಟ್ರಾಫಿಕ್ ಸಮಸ್ಯೆಗೆ ದೊಡ್ಡ ಕಾರಣ
Published on

ಹಾಸನ: ರಾಜ್ಯದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಹಾಸನ ಕೂಡ ಒಂದಾಗಿದ್ದು, ವ್ಯಾಪಾರ ವ್ಯವಹಾರ ಉದ್ಯಮದಲ್ಲಿ ಹಿಂತಿರುಗಿ ನೋಡದಂತೆ ಮುನ್ನುಗ್ಗುತ್ತಿದೆ. ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ಬಂದರು ನಗರಿಯಾಗಿರುವ ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಕೊಂಡಿಯೇ ಹಾಸನ ನಗರವಾಗಿದೆ. ನಗರದಲ್ಲಿ ದಿನೇದಿನೆ ವಾಹನಗಳ ಸಂಚಾರ ಸಂಖ್ಯೆ ಹೆಚ್ಚಾಗಿದ್ದು ಅದರಲ್ಲೂ ಕಾರು ಮತ್ತು ಬೈಕ್‌ಗಳ ಸಂಖ್ಯೆ ಹೆಚ್ಚುತ್ತಲೇ ಇದೆ.ಹೊರ ರಾಜ್ಯಗಳಿಂದ ಹಾಗೂ ಹೊರ ಜಿಲ್ಲೆಗಳಿಂದ ವಿವಿಧ ಉದ್ಯೋಗ, ವ್ಯಾಪಾರಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮಿಗಳು ವ್ಯಾಪಾರಸ್ಥರು, ಕೆಲಸಗಾರರು ಹಾಸನಕ್ಕೆ ಆಗಮಿಸುತ್ತಿದ್ದು, ಇಲ್ಲಿಯೇ ನೆಲೆ ಕಂಡುಕೊಳ್ಳುತ್ತಿದ್ದಾರೆ. ಜೊತೆಗೆ, ಸುತ್ತಮುತ್ತಲ ಹಳ್ಳಿಗಳ ಅನುಕೂಲಸ್ಥ ರೈತರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಸನ ನಗರದಲ್ಲೇ ಮನೆ ಮಾಡಿಕೊಂಡು ವಾಸಿಸುತ್ತಿರುವುದರಿಂದ ನಗರದ ಜನಸಂಖ್ಯೆಯೂ ಬೆಳೆಯುತ್ತಿದೆ.

ಜಿಲ್ಲಾ ಕೇಂದ್ರ ಹಾಸನ ನಗರದ ಜನಸಂಖ್ಯೆ ಸುಮಾರು 1.99 ಲಕ್ಷದಷ್ಟಿದೆ. ಈ ರೀತಿ ಜನಸಂಖ್ಯೆಯಿಂದ ವಾಹನಗಳ ದಟ್ಟಣೆ ಹೆಚ್ಚಾಗಿದ್ದು ಸುಮಾರೂ 80 ಸಾವಿರದರಷ್ಟು ಹೆಚ್ಚಿನ ವಾಹನಗಳು ನಿತ್ಯ ಸಂಚಾರ ಮಾಡುತ್ತಿವೆ. ಇದರಿಂದ ನಗರದ ಹೃದಯಭಾಗವಾದ ಹಳೇ ಬಸ್ ನಿಲ್ದಾಣ ರಸ್ತೆ, ಕಸ್ತೂರ ಬಾ ರಸ್ತೆ, ಹಳೇ ಮುನಿಸಿಪಲ್ ಕಚೇರಿ ರಸ್ತೆ, ಬಿ.ಎಂ.ರಸ್ತೆ, ಶಾಲಾ ಕಾಲೇಜುಗಳು ಹೆಚ್ಚು ಇರುವ ಸಾಲಗಾಮೆ ರಸ್ತೆಗಳಲ್ಲಿ ವಾಹನಗಳ ನಿಲುಗಡೆಗೆ ಪರದಾಡುವಂತಾಗಿದೆ.

ಸಾಲದ್ದಕ್ಕೆ ವಾಹನ ಸವಾರರು ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ವಾಹಗಳನ್ನು ನಿಲ್ಲಿಸುವುದರಿಂದಲೂ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಸರ್ಕಾರಿ, ಖಾಸಗಿ ಉದ್ಯೋಗಿಗಳು ತಮ್ಮ ಕೆಲಸಗಳಿಗಾಗಿ ಪ್ರತಿನಿತ್ಯ ನಗರದಲ್ಲಿ ಸಂಚಾರ ಮಾಡುತ್ತಾರೆ. ಮನೆಯಿಂದ ಹೊರಗಿರುವವರು ಊಟ ತಿಂಡಿಗೆ ಹೋಟೆಲ್‌ಗಳನ್ನು ಅವಲಿಂಬಿಸಿದ್ದು ಮಧ್ಯಾಹ್ನದ ವೇಳೆ ರಸ್ತೆಯ ಬದಿಯಲ್ಲಿ ವಾಹನಗಳ ನಿಲುಗಡೆ ಹೆಚ್ಚಿ ಟ್ರಾಫಿಕ್ ಸಮಸ್ಯೆಗೆ ಒಂದು ದೊಡ್ಡ ಕಾರಣವಾಗಿದೆ.

ನಗರದ ಮಧ್ಯಭಾಗದಲ್ಲಿರುವ ಮಾರುಕಟ್ಟೆಯಲ್ಲಿ ಹೆಚ್ಚಾಗಿ ತರಕಾರಿ, ಬಟ್ಟೆ ಅಂಗಡಿ, ಹೋಟೆಲ್‌ಗಳು, ದಿನಸಿ ಅಂಗಡಿಗಳು ಇರುವುದರಿಂದ ಖರೀದಿಗೆ ಆಗಮಿಸಿದ ಜನರು ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ರಸ್ತೆಬದಿಯಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವುದು ಟ್ರಾಫಿಕ್ ಸಮಸ್ಯೆ ಕಾರಣವಾಗದೆ. ರಿಂಗ್ ರಸ್ತೆ, ಸಂತೆ ಪೇಟೆ, ಹೊಸ ಬಸ್ ನಿಲ್ದಾಣದ ಬಳಿ ಹೆಚ್ಚಾಗಿ ಬಾರ್‌ಗಳು ಇರುವುದರಿಂದ ಮದ್ಯಪಾನಿಗಳು ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಹೋಗುತ್ತಿದ್ದಾರೆ. ಇನ್ನು ಶಾಲಾ ಕಾಲೇಜು ಬಿಡುವ ಸಮಯದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಕಾಣುತ್ತಿದ್ದು ಅಪಾಘಾತಗಳು ಸಂಭವಿಸುತ್ತಿವೆ.

ವಾಹನ ನಿಲುಗಡೆಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದು ಹಾಗೂ ರಸ್ತೆಗಳು ಚಿಕ್ಕದಾಗಿ ರಚನೆಯಾಗಿರುವುದರಿಂದ ಈ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ವಾಹನ ನಿಲುಗಡೆ ಸ್ಥಳದಲ್ಲೂ ವಾಹನ ಸವಾರರು ಕ್ರಮಬದ್ಧವಾಗಿ ವಾಹನ ನಿಲುಗಡೆ ಮಾಡದೆ ಹೇಗೆಂದರೆ ಹಾಗೆ ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದರಿಂದಲೂ ಸಮಸ್ಯೆ ಉದ್ಭವಿಸುತ್ತಿದೆ.

ಅಲ್ಲದೇ ಸರಿಯಾದ ಜಾಗಗಳಲ್ಲಿ ಟ್ರಾಫಿಕ್ ಪೊಲೀಸರು ಇಲ್ಲದೇ ಇರುವುದರಿಂದ ವಾಹನ ಸವಾರರು ಹೇಗೆ ಬೇಕೂ ಹಾಗೆ ವಾಹನ ಚಾಲನೆ ಮಾಡುತ್ತಿದ್ದು ಒನ್ ವೇ ರಸ್ತೆಗಳಲ್ಲಿ ಕಾನೂನಿನ ಅರಿವಿಲ್ಲದೆ ವಾಹನಗಳನ್ನು ಚಾಲನೆ ಮಾಡುತ್ತಿದ್ದು ಪೊಲೀಸರು ್ಗ ಎಲ್ಲೊ ಒಂದು ಕಡೆ ನಿಂತುಕೊಳ್ಳವ ಬದಲು ಮುಖ್ಯವಾಗಿ ಎಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆಯೋ ಅಂತಹ ಜಾಗಗಳಲ್ಲಿ ಅಲರ್ಟ್ ಆಗಬೇಕು .
ಟ್ರಾಫಿಕ್ ಪೊಲೀಸರ ಸಂಖ್ಯೆ ಹೆಚ್ಚಿಸಿ, ಅಡ್ಡಾದಿಡ್ಡಿ ವಾಹನ ಚಾಲನೆ ಮತ್ತು ನಿಲುಗಡೆ ಮಾಡುವ ವಾಹನ ಸವಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬುದು ನಾಗರಿಕರ ಒತ್ತಾಯವಾಗಿದೆ.

‘‘ಟ್ರಾಫಿಕ್ ಸಮಸ್ಯೆಗೆ ಸಾರ್ವಜನಿಕರು ಹಾಗೂ ಪೊಲೀಸರು ಇಬ್ಬರು ಕಾರಣರಾಗಿದ್ದಾರೆ. ಒಂದು ಮನೆಯಲ್ಲಿ ನಾಲ್ಕು ಜನರಿದ್ದರೆ, ನಾಲ್ವರಿಗೂ ಪ್ರತ್ಯೇಕ ವಾಹನಗಳಿರುತ್ತವೆ. ಆದರೆ ಮನೆ ಮುಂದೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ, ಮನೆಯ ಮುಂಭಾಗದ ರಸ್ತೆಯ ಪಕ್ಕದಲ್ಲೇ ನಿಲುಗಡೆ ಮಾಡುತ್ತಾರೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಸಮಸ್ಯೆ ಆಗುತ್ತಿದೆ. ಟ್ರಾಫಿಕ್ ಪೊಲೀಸರ ಸಂಖ್ಯೆ ಕಡಿಮೆ ಇರುವುದರಿಂದ ಟ್ರಾಫಿಕ್ ಸಮಸ್ಯೆ ನಿರ್ವಹಣೆ ಕಷ್ಟ ಆಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಟ್ರಾಫಿಕ್ ಪೊಲೀಸರನ್ನು ನೇಮಕ ಮಾಡಿಕೊಳ್ಳಬೇಕು ಹಾಗೂ ಜನ ಅನಗತ್ಯವಾಗಿ ಒಬ್ಬೊಬ್ಬರು ಒಂದೊಂದು ವಾಹನದಲ್ಲಿ ತಿರುಗುವುದನ್ನು ಕಡಿಮೆ ಮಾಡಬೇಕು.’’

  • ಬಿ.ಸಿ. ಪವನ್ ಕುಮಾರ್, ಬೈಕ್ ಸವಾರ, ದಾಸರಕೊಪ್ಪಲು ನಿವಾಸಿ.

‘‘ಈಗಾಗಲೇ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸಲು ಹಲವು ನಿಯಮಗಳನ್ನು ಮಾಡಿದ್ದೇವೆ, ಟ್ರಾಫಿಕ್ ನಿಯಂತ್ರಿಸಲು ಟ್ರಾಫಿಕ್ ವಾರ್ಡನ್ ವ್ಯವಸ್ಥೆಯನ್ನು ಮರು ಜಾರಿಗೆ ತರುವ ಯೋಜನೆ ಮಾಡಲಾಗಿದೆ. ನೋ ಪಾರ್ಕಿಂಗ್, ಅಸಹಜ ವಾಹನ ಚಾಲನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಈಗಾಗಲೇ ಸಾಕಷ್ಟು ಕಾರ್ಯಾಚರಣೆಗಳನ್ನು ಮಾಡಿ ಸವಾರರಿಗೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ ಟ್ರಾಫಿಕ್ ಪೊಲೀಸರು ಹಾಗೂ ಬ್ಯಾರಿಕೇಡ್‌ಗಳ ಕೊರತೆ ಇರುವುದರಿಂದ ಈ ರೀತಿಯ ಸಮಸ್ಯೆಗಳು ಉಂಟಾಗುತ್ತಿವೆ. 2 ತಿಂಗಳೊಳಗೆ ಟ್ರಾಫಿಕ್ ಸಮಸ್ಯೆ ಬಗೆಹರಿಸಲಾಗುವುದು.’’

  • ಹರಿರಾಮ್ ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹಾಸನ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net