ರಸ್ತೆಯ ಇಕ್ಕೆಲಗಳಲ್ಲಿ ರಾಶಿರಾಶಿ ಕಸ

5
Published on

ಎಂ.ರಾಮೇಗೌಡ ನಂದಗುಡಿ

ಹೊಸಕೋಟೆ ತಾಲೂಕು ವಾಗಟ ಗ್ರಾಪಂ ವ್ಯಾಪ್ತಿಯ ಮಾಕನಹಳ್ಳಿ ಕೆರೆಯ ಬಳಿ ಹಾಗೂ ಊರಿನಿಂದ ಐಒಸಿ ಕಡೆ ಹಾದು ಹೋಗಿರುವ ರಸ್ತೆಯ ಪಕ್ಕದಲ್ಲಿ ತ್ಯಾಜ್ಯದ ತೆಗೆ ಟನ್ ಗಟ್ಟಲೆ ಪ್ಲಾಸ್ಟಿಕ್ ಸುರಿಯಲಾಗಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

ದಿನದಿಂದ ದಿನಕ್ಕೆ ಕಸ ಸುರಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೂ ಅಧಿಕಾರಿಗಳು ತಮಗೆ ಸಂಬಂಧವೇ ಇಲ್ಲದಂತೆ ಇದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪ್ರತಿನಿತ್ಯ ಟನ್ ಗಟ್ಟಲೆ ಸಂಗ್ರಹವಾಗುತ್ತಿರುವ ತ್ಯಾಜ್ಯವನ್ನು ವಿಲೇವಾರಿ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ನಗರ ಮಾತ್ರವಲ್ಲದೆ ಗ್ರಾಮೀಣ ಪ್ರದೇಶವನ್ನೂ ತ್ಯಾಜ್ಯ ಸಮಸ್ಯೆ ಕಾಡುತ್ತಿದೆ. ಬಿಬಿಂಪಿಯು ಇತ್ತೀಚಿಗೆ ನಗರದ ಹೊರ ವಲಯದಲ್ಲಿ ತ್ಯಾಜ್ಯ ಸುರಿಯುವ ಪರಿಪಾಟ ರೂಢಿಸಿಕೊಂಡಿದೆ. ಹಾಗಾಗಿ ಮಾಕನಹಳ್ಳಿ ಸುತ್ತಮುತ್ತಲೂ ತ್ಯಾಜ್ಯ ಬೆಟ್ಟದಂತೆ ಬೆಳೆಯುತ್ತಿದೆ.

ಕಸದ ಗುತ್ತಿಗೆ ತೆಗೆದುಕೊಂಡಿರುವ ದಳ್ಳಾಳಿಗಳು ಟನ್ ಗಟ್ಟಲೆ ತ್ಯಾಜ್ಯವನ್ನು ಮಾಕನಹಳ್ಳಿ ಬಳಿ ರಾತ್ರೋ ರಾತ್ರಿ ತಂದು ಸುರಿಯುತ್ತಿದ್ದಾರೆ. ಇದರಿಂದ ಸುತ್ತಮುತ್ತಲಿನ ಪರಿಸರ ದುರ್ನಾತ ಬೀರುತ್ತಿದ್ದು, ವಾಹನ ಸವಾರರು ಹಾಗೂ ಜನ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ರೋಗ ರುಜಿನಿಗಳ ಭಯದಲ್ಲಿ ಬುದುಕು ದುಡುವಂತಾಗಿದೆ.

ಕೈಗಾರಿಕಾ ತ್ಯಾಜ್ಯವೂ ಸಂಗ್ರಹ: ಮಾಕನಹಳ್ಳಿ ವ್ಯಾಪ್ತಿಯಲ್ಲಿರುವ ಕೆಲ ಕಂಪನಿಗಳು ತ್ಯಾಜ್ಯವನ್ನು ತಂದು ರಸ್ತೆಯ ಇಕ್ಕೆಲಗಳಲ್ಲಿ ಸುರಿಯುತ್ತಿದ್ದು, ಹೇಳೋರೂ, ಕೇಳೋರಿಲ್ಲದಂತಾಗಿದೆ. ಇದರ ತೆಗೆ ದಂಡುಪಾಳ್ಯದಲ್ಲಿರುವ ನಾಲ್ಕೈದು ಸಮುದಾಯ ಭವನಗಳಲ್ಲಿ ನಡೆಯುವ ಸಮಾರಂಭಗಳಲ್ಲಿ ಉಳಿದ ಮಾಂಸದ ತ್ಯಾಜ್ಯವನ್ನು ಈ ಹೆದ್ದಾರಿ ಬದಿಗಳಲ್ಲಿ ಸುರಿದು ಹೋಗಲಾಗುತ್ತಿದೆ. ಇದರಿಂದ ಉಳಿದ ಆಹಾರ ಪದಾರ್ಥಗಳನ್ನು ತಿನ್ನಲು ನಾಯಿಗಳ ಹಿಂಡು ಬರುತ್ತಿದ್ದು, ಒಮ್ಮೊಮ್ಮೆ ನಾಯಿಗಳು ಕಚ್ಚಾಡುತ್ತಾ ರಸ್ತೆಯ ಕಡೆ ರಭಸವಾಗಿ ನುಗ್ಗುವ ಸಂದರ್ಭದಲ್ಲಿ ಬೈಕ್ ಸವಾರರು ಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ. ನಿತ್ಯ ಸಂಚರಿಸುತ್ತಿರುವ ಪ್ರಯಾಣಿಕರು ರಸ್ತೆಯುದ್ದಕ್ಕೂ ಗಬ್ಬು ನಾರುತ್ತ ಬಿದ್ದಿರುವ ಕಸದ ವಾಸನೆಯಿಂದ ಬೇಸತ್ತು ಮೂಗು ಮುಚ್ಚಿಕೊಂಡು ಓಡಾಡುತ್ತಾರೆ.

ಸಾಂಕ್ರಾಮಿಕದ ಆತಂಕ: ವಾಹನಗಳಲ್ಲಿ ಬಂದು ರಸ್ತೆಗಳಲ್ಲಿ ಕಸ ಸುರಿಯುತ್ತಿದ್ದರೂ ಚಾಲಕರನ್ನು ತಡೆಯುವ ಗೋಜಿಗೆ ಅಧಿಕಾರಿಗಳು ಹೋಗಲ್ಲ. ಇದರಿಂದ ರಾತ್ರೋರಾತ್ರಿ ಕಸದ ರಾಶಿಗಳು ಎಲ್ಲೆಂದರಲ್ಲಿ ಬಿದ್ದಿರುತ್ತದೆ. ಈ ರಸ್ತೆಯಲ್ಲಿ ಅನೇಕ ಜನಪ್ರತಿಧಿಗಳು ಸಂಬಧಪಟ್ಟ ಅಧಿಕಾರಿಗಳು ಓಡಾಡುತ್ತಿರುತ್ತಾರೆ. ಇವರೂ ನೋಡಿಯೂ ನೋಡದಂತೆ ಸಂಚರಿಸುತ್ತಾರೆ. ಕಸ ಸುರಿಯುವುದರಿಂದ ಅನೇಕ ರೋಗ ರುಜಿನಗಳು ಬರುವುದರಲ್ಲಿ ಸಂಶಯವಿಲ್ಲ.

ಜಡಿಗೇನಹಳ್ಳಿ ಹೋಬಳಿ ವಾಗಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 11 ಗ್ರಾಮಗಳಿದ್ದು, ತ್ಯಾಜ್ಯ ಘಟಕ ವಿಲೇವಾರಿ ಕಟ್ಟಡ ನಿರ್ಮಿಸಲು ಜಾಗದ ಸಮಸ್ಯೆಯಿದೆ. ನಾನು ಬಂದ ಮೇಲೆ ಅಧ್ಯಕ್ಷರು ಮತ್ತು ಸದಸ್ಯರ ಸಮ್ಮುಖದಲ್ಲಿ ದೇವಿ ಶೆಟ್ಟಳ್ಳಿ ಗ್ರಾಮದಲ್ಲಿ ಜಾಗ ಗುರುತಿಸಿದ್ದು, ನರೇಗಾ ಯೋಜನೆಯಡಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಇನ್ನು ಕೆಲವೇ ತಿಂಗಳಲ್ಲಿ ಘಟಕ ಸಿದ್ಧವಾಗಲಿದೆ. ಮುಂದಿನ ದಿನಗಳಲ್ಲಿ ಇದರ ಸಮಸ್ಯೆ ಬಗೆಹರಿಯಲಿದೆ. ಹಲವರು ರಾತ್ರಿ ವೇಳೆ ತ್ಯಾಜ್ಯ ಸುರಿಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಮುನಿವೆಂಕಟಸ್ವಾಮಿ ಪಿಡಿಒ ವಾಗಟ ಗ್ರಾಮ ಪಂಚಾಯಿತಿ ರಸ್ತೆ ಬದಿಗಳಲ್ಲಿ ಸುರಿಯುತ್ತಿರುವ ತ್ಯಾಜ್ಯದಿಂದ ಹೊರ ಬರುತ್ತಿರುವ ದುರ್ವಾಸನೆಯಿಂದ ಪಕ್ಕದ ತೋಟದ ರೈತರು ತೋಟಗಳಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ತ್ಯಾಜ್ಯ ಹಾಕುವುದನ್ನ ನಿಲ್ಲಿಸಬೇಕು. ಇಲ್ಲದಿದ್ದರೆ ಗ್ರಾಪಂ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ರಾಜಪ್ಪ ಮಾಕನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net