ರಸ್ತೆಬದಿ ಅಂಗಡಿಗಳ ತೆರವಿಗೆ ಗಡುವು

FotoJet (2)
Published on

ವಾರದೊಳಗೆ ಖಾಲಿ ಮಾಡುವಂತೆ ವರ್ತಕರಿಗೆ ನಗರಸಭೆ ಸೂಚನೆ

ದೊಡ್ಡಬಳ್ಳಾಪುರ : ರಸ್ತೆಗಳನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುವ ಬೀದಿಬದಿ ವರ್ತಕರು ಮತ್ತು ವ್ಯಾಪಾರಿಗಳಿಗೆ ಒತ್ತುವರಿ ತೆರವುಗೊಳಿಸಲು ನಗರಸಭೆ ಒಂದು ವಾರದ ಗಡುವು ನೀಡಿದೆ.

ರಸ್ತೆಯ ಎರಡೂ ಪಕ್ಕ ಎಳೆದಿರುವ ಗೆರೆ ದಾಟಿ ಬಂದು ವ್ಯಾಪಾರ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತ ಕಾರ್ತಿಕ್ ಈಶ್ವರ್ ಎಚ್ಚರಿಕೆ ನೀಡಿದ್ದಾರೆ.

ಪುರಭವನದಲ್ಲಿ ಶನಿವಾರ ಆಯೋಜಿಸಿದ್ದ ಬೀದಿಬದಿ ವ್ಯಾಪಾರಿಗಳ ಸಭೆ ಹಾಗೂ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಎಚ್ಚರಿಕೆ ನೀಡಿದ ಕಾರ್ತಿಕ್ ಈಶ್ವರ್, ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ನಿಗದಿತ ಸ್ಥಳದಲ್ಲಿ ಅಂಗಡಿ ಇಡಬೇಕು. ಒಂದು ವೇಳೆ ಗೆರೆ ದಾಟಿ ಬಂದರೆ ದಂಡ ಮತ್ತು ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ನಗರದ ಬಸ್ ನಿಲ್ದಾಣ, ಕೆ.ಆರ್.ಮಾರುಕಟ್ಟೆ ಪ್ರದೇಶದ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡ ಬೇಕು. ಅಂಗಡಿ ಪರವಾನಗಿ ಕಡ್ಡಾಯ, ಪ್ಲಾಸ್ಟಿಕ್ ಬಳಕೆ ಸಂಬಂಧ ನಿಯಮ ಪಾಲಿಸಬೇಕು ಎಂದು ಹೇಳಿದರು.

ಇತ್ತೀಚೆಗೆ ಬೀದಿಬದಿ ವರ್ತಕರು ರಸ್ತೆಗಳಲ್ಲಿಯೇ ಅಂಗಡಿ ಇಟ್ಟುಕೊಂಡು ಸಾರ್ವಜನಿಕರ ಓಡಾಟ ಹಾಗೂ ಸಂಚಾರಕ್ಕೆ ತೊಂದರೆ ನೀಡುತ್ತಿರುವ ಬಗ್ಗೆ ದೂರುಗಳು ಹೆಚ್ಚಾಗಿ ಬರುತ್ತಿವೆ.

ಬೀದಿಬದಿ ವ್ಯಾಪಾರಿಗಳಿಗೆ ತೊಂದರೆ ಮಾಡುವ ಉದ್ದೇಶ ನಮ್ಮದಲ್ಲ. ಆದರೆ ಸಾರ್ವಜನಿಕರಿಗೆ ತೊಂದರೆ ನೀಡಿ ನಿಯಮಬಾಹಿರವಾಗಿ ವ್ಯಾಪಾರ ಮಾಡುವುದು ಸರಿಯಲ್ಲ. ಮಾರುಕಟ್ಟೆ ಪ್ರದೇಶದಲ್ಲಿ ಈರುಳ್ಳಿಯನ್ನು ರಸ್ತೆ ಮಧ್ಯವೇ ಶುದ್ಧ ಮಾಡುವುದನ್ನು ನಿಲ್ಲಿಸಬೇಕು. ಹೂವಿನ ಅಂಗಡಿಗಳು ಸಹ ನಿಯಮ ಪಾಲಿಸಬೇಕು. ನಿಯಮಗಳನ್ನು ಉಲ್ಲಂಘಿಸಿದರೆ ಅಂಗಡಿಗಳ ತರಕಾರಿ ಹಾಗೂ ಇತರ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡು ಪ್ರಕರಣ ದಾಖಲಿಸಲಾಗುವುದು. ಕಸ ವಿಂಗಡನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವ ನಿಯಮ ಉಲ್ಲಂಘನೆ ಮಾಡಿದರೆ ಮೂರು ತಿಂಗಳು ಜೈಲು ಶಿಕ್ಷೆ ಹಾಗೂ ದಂಡ ತೆರಬೇಕಾಗುತ್ತದೆ ಎಂದು ಪೌರಾಯುಕ್ತ ಕಾರ್ತಿಕ್ ಈಶ್ವರ್ ಎಚ್ಚರಿಸಿದರು.

ನಾಮಫಲಕಗಳಲ್ಲಿ ಶೇ.60 ಕನ್ನಡ ಭಾಷೆ ಬಳಸಿ

ಪ್ರತಿಯೊಬ್ಬ ವ್ಯಾಪಾರಸ್ಥರೂ ವಾಣಿಜ್ಯ ಪರವಾನಗಿ ಪಡೆಯಬೇಕು. ನಾಮಫಲಕಗಳಲ್ಲಿ ಶೇ.60 ಕನ್ನಡ ಭಾಷೆ ಬಳಸಬೇಕು. ಮಾಂಸದ ಅಂಗಡಿಗಳ ಮಾಲೀಕರು ನಗರಸಭೆ ಸೂಚಿಸಿರುವಂತೆ ಕಸ ವಿಲೇವಾರಿ ಮಾಡಬೇಕು ಹಾಗೂ ನಗರಸಭೆಗೆ ಕಸ ವಿಲೇವಾರಿಯ ಕರ ನೀಡಬೇಕು. ಯಾವುದೇ ಕಾರಣಕ್ಕೂ ನಿಯಮ ಉಲ್ಲಂಘನೆ ಮಾಡದಂತೆ ನಗರವನ್ನು ಸ್ವಚ್ಛವಾಗಿಡಲು ಸಹಕರಿಸಬೇಕು ಎಂದು ನಗರಸಭೆ ಉಪಾಧ್ಯಕ್ಷ ಎಂ.ಮಲ್ಲೇಶ್ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net