ರಸ್ತೆಗೆ ಹರಿಯುತ್ತಿರುವ ಒಳಚರಂಡಿ ನೀರು

Medehalli road
Published on

ಚಿತ್ರದುರ್ಗ: ನಗರದ ಮೆದೇಹಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ಕೆಳಸೇತುವೆ ಮಾರ್ಗದಲ್ಲಿ ಕಳೆದ ಒಂದೂವರೆ ತಿಂಗಳಿನಿಂದಲೂ ಒಳಚರಂಡಿ ನೀರು ತುಂಬಿ ಹರಿಯುತ್ತಿದ್ದು, ಮೈಮೇಲೆಲ್ಲ ಕೊಳಚೆ ಸಿಡಿಸಿಕೊಂಡು ವಾಹನ ಸವಾರರು ಮತ್ತು ಪಾದಚರಿಗಳು ಸಂಚರಿಸುವ ದುಸ್ಥಿತಿ ನಿರ್ಮಾಣವಾಗಿದೆ.

ಮ್ಯಾನ್‌ವೋಲ್‌ನಿಂದ ಹೊರಬರುತ್ತಿರುವ ಕೊಳಚೆ ನೀರಿನಿಂದ 150 ಮೀಟರ್ ವ್ಯಾಪ್ತಿಯಲ್ಲಿ ದುರ್ನಾತ ಬೀರುತ್ತಿದ್ದು, ಈ ಮಾರ್ಗವಾಗಿ ಸಂಚರಿಸಲು ಅನೇಕರು ಹಿಂದೇಟು ಹಾಕುವಂತಾಗಿದೆ. ನೀರು ಹರಿದು ಬರುವುದು ಮುಂದುವರೆದ ಪರಿಣಾಮ ಸಾಂಕ್ರಾಮಿಕ ರೋಗದ ಭೀತಿಯೂ ಸಾರ್ವಜನಿಕರನ್ನು ಕಾಡತೊಡಗಿದೆ.

ಕೆಳ ಸೇತುವೆ ಸುತ್ತಮುತ್ತಲಿನ ವಾತಾವರಣ ಹದಗೆಟ್ಟಿದ್ದು, ನಗರಸಭೆಯ ಒಂದಿಬ್ಬರು ಸಿಬ್ಬಂದಿ ಸ್ಥಳ ಪರಿಶೀಲಿಸಿರುವುದನ್ನು ಬಿಟ್ಟರೆ, ಯಾವುದೇ ಕ್ರಮವಹಿಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ತರಾಸು ರಂಗಮಂದಿರದ ಮುಂಭಾಗವೂ ಆಗಿಂದಾಗ್ಗೆ ಒಳಚರಂಡಿ ನೀರು ಹೊರಗೆ ಹರಿದು ಬರುತ್ತದೆ. ಸಾರ್ವಜನಿಕರಿಗೆ ತೊಂದರೆ ಉಂಟಾದಾಗ ತಕ್ಷಣ ಸ್ಪಂದಿಸಬೇಕಾದ್ದು, ಸಂಬಂಧಿಸಿದ ಅಧಿಕಾರಿಗಳ ಕರ್ತವ್ಯ. ಕೂಡಲೇ ಈ ಸಮಸ್ಯೆ ಬಗೆಹರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಎಂ.ಕೆ.ಪ್ರಹ್ಲಾದ್ ಒತ್ತಾಯಿಸಿದ್ದಾರೆ.

ಸ್ವಚ್ಛತೆಗೆ ಕ್ರಮವಹಿಸಿ: ಒಂದೂವರೆ ತಿಂಗಳಿನಿಂದಲೂ ಚರಂಡಿ ನೀರು ರಸ್ತೆಗೆ ಹರಿಯುತ್ತಿದ್ದು, ಸಾರ್ವಜನಿಕರು ನರಕ ಯಾತನೆ ಅನುಭವಿಸುವಂತಾಗಿದೆ. ಕೂಡಲೇ ಒಳಚರಂಡಿ ಸ್ವಚ್ಛಗೊಳಿಸಿ ಜನಸಾಮಾನ್ಯರ ಆರೋಗ್ಯ ಕಾಪಾಡಬೇಕು ಎಂದು ಅಂತರ್ಜಲ ತಜ್ಞ ಎನ್.ಜೆ.ದೇವರಾಜರೆಡ್ಡಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net