

ಚಿತ್ರದುರ್ಗ: ಸೇವಂತಿ ಸೇರಿ ವಿವಿಧ ಹೂ ಬೆಳೆಗಳು ನಮ್ಮ ಜೀವನಾಡಿ, ಅದರಿಂದಲೇ ಬದುಕು ಕಟ್ಟಿಕೊಂಡು ಪಯಣ ಸಾಗುತ್ತಿದೆ, ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೂ ಅವಲಂಬಿತರಾಗಿದ್ದೇವೆ, ಅದನ್ನು ಕಾಪಾಡಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಹೂ ಬೆಳೆಗಾರರಿಗೆ ದಿಕ್ಕೇ ತೋಚದಂತಾಗಿದೆ…
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಸೇವಂತಿ ಪುಷ್ಪದ ರಾಶಿ ಹಾಗೂ ಅದರ ರಕ್ಷಣೆಗಾಗಿ ಸಿಂಪಡಿಸುವ ಔಷಧ ಬಾಟಲಿಗಳನ್ನು ಸುರಿದು ರಾಜ್ಯ ರೈತಸಂಘದ ಪದಾಧಿಕಾರಿಗಳು ಹಾಗೂ ನೂರಾರು ಹೂ ಬೆಳೆಗಾರರು ಪ್ರತಿಭಟನೆ ನಡೆಸಿ, ಅಳಲು ತೋಡಿಕೊಂಡರಲ್ಲದೆ, ಆಕ್ರೋಶ ವ್ಯಕ್ತಪಡಿಸಿದ ಪರಿ ಇದು.
ಚಿತ್ರದುರ್ಗ ತಾಲೂಕೊಂದರಲ್ಲೇ ಸಾವಿರಾರು ಕುಟುಂಬ ಜೀವನೋಪಾಯಕ್ಕಾಗಿ ಪುಷ್ಪ ಕೃಷಿಯಲ್ಲಿ ನಿರತವಾಗಿವೆ. ಸತತ ನಾಲ್ಕೈದು ವರ್ಷಗಳಿಂದ ಹೂವುಗಳಿಗೆ ನುಸಿ ರೋಗ ಬಾಧೆ ಕಾಣಿಸಿಕೊಂಡು ಹೆಚ್ಚುತ್ತಲೇ ಇದೆ. ಯಾವುದೇ ಔಷಧ ಸಿಂಪಡಿಸಿದರೂ ಹತೋಟಿಗೆ ಬರುತ್ತಿಲ್ಲ. ಅನೇಕ ಅಂಗಡಿಗಳಲ್ಲಿ ಕಳಪೆ ಔಷಧಗಳನ್ನು ಎಗ್ಗಿಲ್ಲದೆ ಮಾರಾಟ ಮಾಡುತ್ತಿದ್ದಾರೆ. ಅದನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಹೂವುಗಳನ್ನು ವಾಣಿಜ್ಯ ಕೃಷಿಯಾಗಿ ಬೆಳೆಯಲಾಗುತ್ತಿದೆ. ಅಲ್ಪಸ್ವಲ್ಪ ಅಚ್ಚುಕಟ್ಟು ಜಮೀನಿನಲ್ಲಿ ಇದರ ಉತ್ಪಾದನೆಯಲ್ಲಿ ಹಲವರು ನಿರತರಾಗಿದ್ದಾರೆ. ಆದರೆ, ನುಸಿರೋಗ ಹೂವುಗಳನ್ನು ತಿಂದು ಹಾಕುತ್ತಿದ್ದು, ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ತೋಟಕ್ಕೆ ಬಂದು ಸೂಕ್ತ ಸಲಹೆ ನೀಡುತ್ತಿಲ್ಲ. ಸಮಯಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಜಿಲ್ಲೆ ಮತ್ತು ತಾಲೂಕಿನೊಳಗೆ ಇಲಾಖೆ ಅಥವಾ ಅಧಿಕಾರಿಗಳು ಇದ್ದಾರೋ ಇಲ್ಲವೋ ಎಂಬ ಅನುಮಾನ ರೈತ ವಲಯದಲ್ಲಿ ಉಂಟಾಗಿದೆ. ನಿಜಕ್ಕೂ ಇದ್ದರೆ, ಕೂಡಲೇ ನೆರವಿಗೆ ಧಾವಿಸಬೇಕು. ಜಿಲ್ಲಾಧಿಕಾರಿ ಅವರು ಇತ್ತ ಗಮನಹರಿಸಿ ನುಸಿಹುಳು ಬಾಧೆ ನಿಯಂತ್ರಣಕ್ಕೆ ಕ್ರಮ ಕೈಗೊಂಡು ಬೆಳೆಗಾರರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ತಾಲೂಕು ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಬೆಳೆಗಾರರಾದ ಕೆ.ಎಂ. ಕಾಂತರಾಜು, ವೈ.ಮೂರ್ತಿ, ಮಲ್ಲಿಕಾರ್ಜುನಪ್ಪ, ಬಿ.ಕೆ.ನಾಗರಾಜು, ಮೂರ್ತಪ್ಪ, ಎಂ.ಬಿ.ತಿಪ್ಪೇಸ್ವಾಮಿ, ಜಿ.ಮಹಂತಣ್ಣ, ಜಿ.ಶಾಂತಣ್ಣ, ಅಶೋಕ್, ಬಿ.ಟಿ.ಯಲ್ಲಪ್ಪ ಇತರರಿದ್ದರು.