ರಸ್ತೆಗೆ ವಿಷ್ಣು ಹೆಸರಿಡಲು ಒತ್ತಾಯ

Published on

ಚಾಮರಾಜನಗರ: ಸಿನಿಮಾಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಡಾ.ವಿಷ್ಣುವರ್ಧನ್ ಜಾತ್ಯತೀತ ನಟರಾಗಿ ಎಲ್ಲ ಸಮುದಾಯದ ಅಭಿಮಾನಿಗಳನ್ನು ಹೊಂದಿದ್ದರು ಎಂದು ಕನ್ನಡ ನೆಲ-ಜಲ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಹೇಳಿದರು.

ನಗರದ ನ್ಯಾಯಲಯ ರಸ್ತೆಯಲ್ಲಿರುವ ಪಿಎಚ್‌ಪಿ ಶಾಲೆಯ ಸಮೀಪ ಕನ್ನಡ ನೆಲ-ಜಲ ಸಾಂಸ್ಕೃತಿಕ ವೇದಿಕೆ ವತಿಯಿಂದ ಬುಧವಾರ ಆಯೋಜಿಸಿದ್ದ 15ನೇ ವರ್ಷದ ವಿಷ್ಣು ನೆನಪಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜ ಸುಧಾರಣೆಯಲ್ಲಿ ವಿಷ್ಣುವರ್ಧನ್ ಅವರ ಸಿನಿಮಾಗಳ ಪಾತ್ರವೂ ಇದೆ. ನಗರದ ಪ್ರಮುಖ ರಸ್ತೆ ಮತ್ತು ವೃತ್ತಕ್ಕೆ ವಿಷ್ಣು ಅವರ ಹೆಸರು ಇಡಬೇಕೆಂದು ಹಲವು ವರ್ಷಗಳಿಂದ ಒತ್ತಾಯ ಮಾಡಲಾಗುತ್ತಿದೆ. ಆದರೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲೂ ಈ ತಾತ್ಸಾರ ಮುಂದುವರಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಗರಸಭೆ ಅಧ್ಯಕ್ಷ ಸುರೇಶ್ ಮಾತನಾಡಿ, ಚಾಮರಾಜನಗರ ಜಿಲ್ಲೆ ಜಾನಪದ ಕಲೆಗಳ ತವರೂರಾಗಿದ್ದು, ಸಾಂಸ್ಕೃತಿಕವಾಗಿ ಸಿರಿವಂತ ಜಿಲ್ಲೆಯಾಗಿದೆ ಎಂದರು. ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್, ಸುರೇಶ್, ಬಸವರಾಜೇಂದ್ರ ಮಾತನಾಡಿದರು. ಮೈಸೂರಿನ ವಿಷ್ಣು ಆರ್ಕೆಸ್ಟ್ರಾ ತಂಡದಿಂದ ವಿಷ್ಣು ಗೀತ ಗಾಯನ ಕಾರ್ಯಕ್ರಮ ನಡೆಯಿತು. ನಗರಸಭೆ ಉಪಾಧ್ಯಕ್ಷೆ ಮಮತಾ, ಸರ್ಕಾರಿ ವಕೀಲ ಅರುಣ್‌ಕುಮಾರ್, ಕನಿಷ್ಠ ವೇತನ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್, ಮುಖಂಡ ಆಲೂರು ಮಲ್ಲು, ಸುರೇಶ್‌ನಾಗ್, ಮಹೇಶ್, ಸಿ.ಡಿ.ಪ್ರಕಾಶ್, ಆನಂದ್ ಭಗೀರಥ, ಶಿವು ಮತ್ತು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net