

ಕೊಳ್ಳೇಗಾಲ: ಪಟ್ಟಣದ ಹಳೇ ಕುರುಬರ ಬೀದಿಯ ರಸ್ತೆಯಲ್ಲಿ 11 ಕೆವಿ ವಿದ್ಯುತ್ ಕಂಬ ರಸ್ತೆಗೆ ವಾಲಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಹಳೇ ಕುರುಬರ ಬೀದಿಗೆ ತೆರಳುವ ಮುಖ್ಯ ರಸ್ತೆಯಲ್ಲಿರುವ ಅಪಾಯಕಾರಿ ಕಂಬವಿದ್ದು, ಡಾ.ರಾಜ್‌ಕುಮಾರ್ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ರಸ್ತೆಗೆ ಸಂಪರ್ಕಿಸಲು ಕುರುಬರ ಬೀದಿ ನಿವಾಸಿಗಳು ಈ ರಸ್ತೆಯನ್ನು ಅವಲಂಬಿಸಿದ್ದಾರೆ. ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಹಾಗೂ ಜನ ಸಮಾನ್ಯರು ಸಂಚರಿಸುವ ಪ್ರಮುಖ ರಸ್ತೆ ಇದಾಗಿದೆ.
ಈ ವಿದ್ಯುತ್ ಕಂಬವು ರಸ್ತೆ ಕಡೆಗೆ ವಾಲಿರುವುದಲ್ಲದೆ, ಕಂಬದ ಬುಡದಲ್ಲಿ ಸಣ್ಣ ಸಣ್ಣ ಬಿರುಕುಗಳು ಬಿದ್ದಿವೆ. ಕಂಬದ ಪಕ್ಕದಲ್ಲಿ ಮನೆಗಳು, ಅಂಗಡಿಗಳಿವೆೆ. ಬಿರುಗಾಳಿ ಸಮೇತ ಮಳೆ ಬಂದರೆ ಕಂಬದ ಸಮೀಪವಿರುವ ಮನೆಗಳ ನಿವಾಸಿಗಳು ಹಾಗೂ ಅಂಗಡಿ ಮಾಲೀಕರಿಗೆ ಅಪಾಯ ಸಂಭವಿಸುವ ಸಾಧ್ಯತೆ ಇದೆ.
ಈ ಬಗ್ಗೆ ಕರುಬರ ಬೀದಿಯ ನಿವಾಸಿಗಳು ಸೆಸ್ಕ್ ಅಧಿಕಾರಿಗಳು ಹಾಗೂ ಲ್ಯಾನ್‌ಮ್ಯಾನ್‌ಗಳಿಗೆ ಮೌಖಿಕವಾಗಿ ದೂರಿದ್ದರೂ ಪ್ರಯೋಜನವಾಗಿಲ್ಲ. ಕಂಬ ಬಿದ್ದು ಏನಾದರೂ ಸಾವು, ನೋವುಗಳಾದರೆ ಸೆಸ್ಕ್ ಅಧಿಕಾರಿಗಳಿಗೆ ಹೊಣೆ ಆಗುತ್ತಾರೆ ಎಂದು ನಿವಾಸಿಗಳು ಅಕ್ರೋಶ ಹೊರಹಾಕಿದ್ದಾರೆ.