ರಸ್ತೆಗೆ ಬಿದ್ದ ಜಲ್ಲಿಕಲ್ಲುಗಳಿಂದ ಅಪಘಾತ

25-GPT-1B
Published on

ಗುಂಡ್ಲುಪೇಟೆ: ಟಿಪ್ಪರ್‌ಗಳು ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಜಲ್ಲಿಕಲ್ಲು ತುಂಬಿಸಿಕೊಂಡು ಸಂಚರಿಸುತ್ತಿರುವುದರಿಂದ ರಸ್ತೆಯುದ್ದಕ್ಕೂ ಜಲ್ಲಿಕಲ್ಲುಗಳನ್ನು ಚೆಲ್ಲುತ್ತಿರುವ ಪರಿಣಾಮ ಇತರ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಹೀಗಿದ್ದರೂ ಸಂಬಂಧಪಟ್ಟವರು ಯಾವುದೇ ಕ್ರಮಕೈಗೊಳ್ಳದ ಬಗ್ಗೆ ಸಾರ್ವಜನಿಕರು ಆಕ್ರೋಶವ್ಯಕ್ತಪಡಿಸಿದ್ದಾರೆ.
ಪಟ್ಟಣದ ಸುತ್ತಮುತ್ತ ಹಾಗೂ ತಾಲೂಕಿನ ಹಲವಾರು ಕಡೆಗಳಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಬೇಗೂರು, ಗರಗನಹಳ್ಳಿ, ಮಡಹಳ್ಳಿ ಹಾಗೂ ತೆರಕಣಾಂಬಿ ಸುತ್ತಮುತ್ತಲೂ ಸುಮಾರು 25ಕ್ಕೂ ಹೆಚ್ಚಿನ ಕ್ರಷರುಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ದಿನವೂ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿರುವ ಕ್ರಷರುಗಳಿಂದ ಟಿಪ್ಪರ್‌ಗಳು ಜಲ್ಲಿ ಮತ್ತು ಎಂ-ಸ್ಯಾಂಡ್ ಅನ್ನು ಸಾಮರ್ಥ್ಯಕ್ಕಿಂತ ಹೆಚ್ಚಾಗಿ ತುಂಬಿಸಿಕೊಂಡು ಸಾಗಿಸುವುದರಿಂದ ರಸ್ತೆಗಳು ಹಾಳಾಗುತ್ತಿವೆ. ಜತೆಗೆ ರಸ್ತೆಯ ಉಬ್ಬುಗಳು ಹಾಗೂ ತಿರುವುಗಳಲ್ಲಿ ಜಲ್ಲಿಕಲ್ಲು ಹಾಗೂ ಎಂ-ಸ್ಯಾಂಡ್ ಹೊರಚೆಲ್ಲಿ ರಸ್ತೆಗೆ ಬೀಳುತ್ತಿವೆ.
ಪರಿಣಾಮ ಈ ವಾಹನಗಳ ಹಿಂದೆ ಸಂಚರಿಸುವ ದ್ವಿಚಕ್ರ ವಾಹನಗಳ ಸವಾರರ ಕಣ್ಣಿಗೆ ಎಂ-ಸ್ಯಾಂಡ್‌ನ ಧೂಳು ಬಿದ್ದು, ತೊಂದರೆಯಾಗುವುದರ ಜತೆಗೆ ರಸ್ತೆ ಮೇಲೆ ಚೆಲ್ಲಿದ ಎಂ-ಸ್ಯಾಂಡ್‌ಗಳಿಂದ ಬೈಕ್‌ಗಳ ಚಕ್ರಗಳು ಜಾರಿ ಸವಾರರು ಕೆಳಗೆ ಬಿದ್ದು ಅಪಘಾತಕ್ಕೊಳಗಾಗುತ್ತಿದ್ದಾರೆ. ಜತೆಗೆ ರಸ್ತೆಯಲ್ಲಿ ಬಿದ್ದ ಜಲ್ಲಿಗಳು ಮೊನಚಾಗಿರುವುದರಿಂದ ಅವುಗಳ ಮೇಲೆ ಸಾಗುವ ಬಸ್ಸು, ಕಾರು, ಬೈಕ್ ಮುಂತಾದ ವಾಹನಗಳ ಚಕ್ರಗಳು ಪಂಕ್ಚರ್ ಆಗುತ್ತಿವೆ.
ಕಳೆದ ವರ್ಷ ಬೇಗೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಮೇಲೆ ಬಿದಿದ್ದ ಜಲ್ಲಿಕಲ್ಲಿನಿಂದಾಗಿ ಕಾರಿನ ಚಕ್ರ ಪಂಕ್ಚರ್ ಆಗಿ, ಚಾಲಕನ ನಿಯಂತ್ರಣ ತಪ್ಪಿದ ಕಾರು ಅಪಘಾತಕ್ಕೀಡಾಗಿ ಸ್ಥಳದಲ್ಲಿಯೇ ನಾಲ್ವರು ಪ್ರಯಾಣಿಕರು ಸಾವಿಗೀಡಾಗಿದ್ದರು. ಇಷ್ಟಾದರೂ ಅಗತ್ಯಕ್ಕಿಂತ ಹೆಚ್ಚು ಸರಕು ಸಾಗಿಸುವ ಟಿಪ್ಪರ್‌ಗಳ ವಿರುದ್ಧ ಪ್ರಾದೇಶಿಕ ಸಾರಿಗೆ ಇಲಾಖೆಯಾಗಲಿ, ಪೊಲೀಸರಾಗಲಿ ಕ್ರಮಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net