ರಸ್ತೆಗೆ ಕೊಬ್ಬರಿ ಸುರಿದು ರೈತರಿಂದ ಪ್ರತಿಭಟನೆ

15 NMG 01 (4)
ನಾಗಮಂಗಲ ತಾಲೂಕಿನ ಕದಬಹಳ್ಳಿ ಎಪಿಎಂಸಿ ಮಾರುಕಟ್ಟೆ ಸಮೀಪದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ರಸ್ತೆಗೆ ಕೊಬ್ಬರಿ ಸುರಿದು ಬೆಂಕಿ ಹಾಕಿ ಸುಡುವ ಮೂಲಕ ರೈತರು ಪ್ರತಿಭಟನೆ ನಡೆಸಿದರು.
Published on

ನಾಗಮಂಗಲ: ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚಿಸುವಂತೆ ಒತ್ತಾಯಿಸಿ ನೂರಾರು ರೈತರು ರಸ್ತೆಗೆ ಕೊಬ್ಬರಿ ಸುರಿದು ಬೆಂಕಿಹಾಕಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಕದಬಹಳ್ಳಿ ಎಪಿಎಂಸಿ ಮಾರುಕಟ್ಟೆ ಸಮೀಪವಿರುವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ರಸ್ತೆಯಲ್ಲಿ ಶನಿವಾರ ರೈತರು ಚೀಲಗಳಲ್ಲಿ ತಂದಿದ್ದ ಕೊಬ್ಬರಿಯನ್ನು ಸುರಿದು ಅವುಗಳಿಗೆ ಬೆಂಕಿಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ರಂಗನಾಥಸ್ವಾಮಿ ದೇವಾಲಯದ ಆವರಣದಿಂದ ಎಪಿಎಂಸಿ ಮಾರುಕಟ್ಟೆವರೆಗೆ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ರೈತರು ಕೊಬ್ಬರಿ ಖರೀದಿ ಕೇಂದ್ರದ ಮುಂಭಾಗಕ್ಕೆ ತೆರಳಿ ಬೆಂಬಲ ಬೆಲೆ ಹೆಚ್ಚಿಸುವಂತೆ ಘೋಷಣೆಗಳನ್ನು ಕೂಗಿದರು. ತದನಂತರ ರಾಷ್ಟ್ರೀಯ ಹೆದ್ದಾರಿ ಮೂಲಕ ಪ್ರತಿಭಟನಾ ಮೆರವಣಿಗೆ ಸಾಗಲು ಮುಂದಾದಾಗ ಪೊಲೀಸರು ರೈತರ ಮನವೊಲಿಸಿದರು. ತದನಂತರ ದೇವಾಲಯದ ಆವರಣಕ್ಕೆ ತೆರಳಿ ಬಹಿರಂಗ ಸಭೆ ನಡೆಸಿದರು.
ಮೌನ ಪ್ರತಿಭಟನೆ ಮೆರವಣಿಗೆಯ ನಂತರ ನಡೆದ ಬಹಿರಂಗ ಸಭೆಯಲ್ಲಿ ರೈತ ಸಂಘದ ರಾಜ್ಯ ಸಂಚಾಲಕಿ ನಂದಿನಿ ಜಯರಾಮ್ ಮಾತನಾಡಿ, ಕೊಬ್ಬರಿ ಬೆಲೆ ಕುಸಿತಕ್ಕೆ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯೇ ಕಾರಣ. ರೈತಾಪಿ ವರ್ಗ ಬೆಲೆ ಕುಸಿತದಿಂದ ಕಂಗಲಾಗಿದ್ದು, ರೈತನ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ. ಮದ್ದೂರು ತಾಲೂಕಿನ 35 ವರ್ಷದ ಯುವ ರೈತ ಹೆಣ್ಣು ಸಿಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ. ನನ್ನ ತವರೂರು ನಾಗಮಂಗಲ ತಾಲೂಕಿನ ಕರಡಹಳ್ಳಿ ಗ್ರಾಮದಲ್ಲಿ 23 ಜನ 35 ವರ್ಷ ತುಂಬಿದ ಯುವಕರು ಹೆಣ್ಣು ಸಿಗದೆ ಮದುವೆಯನ್ನೇ ಆಗಿಲ್ಲ. ಹೀಗಾದರೆ ನಾವು ಪಿತೃಪಕ್ಷದ ಬದಲು ಪುತ್ರ ಪಕ್ಷ ಮಾಡುವ ಪರಿಸ್ಥಿತಿ ಬರಲಿದೆ. ಈ ಬಗ್ಗೆ ಸರ್ಕಾರಗಳು ತೀವ್ರ ನಿರ್ಲಕ್ಷ ತೋರುತ್ತಿವೆ. ಈ ವಿಚಾರವಾಗಿ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಮಾಡಬೇಕಿದೆ ಎಂದರು.
ಕೊಬ್ಬರಿ ಬೆಲೆ ಕುಸಿಯಲು ಹೊರದೇಶದಿಂದ ತೆರಿಗೆ ಮುಕ್ತವಾಗಿ ಅಡುಗೆ ಎಣ್ಣೆ ಆಮದಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಕೊಬ್ಬರಿ ಧಾರಣೆ ಕುಸಿದು ಅದನ್ನೆ ನಂಬಿ ಜೀವನ ಮಾಡುವ ರೈತರು ಬೀದಿಗೆ ಬರುವಂತಾಗಿದೆ. ಈಗಲಾರದೂ ರೈತರು ಪ್ರಜ್ಞಾವಂತರಾಗಿ ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕಿದೆ ಎಂದರು.
ಹಾಸನ ಜಿಲ್ಲೆಯಲ್ಲಿ 2011 ರಿಂದ ಮೂರು ವರ್ಷ ಸತತ ಬರದಿಂದ ತೆಂಗಿನ ಮರಗಳು ನಶಿಸುವ ಹಂತಕ್ಕೆ ಬಂದಾಗ ಘೋರಕ್‌ನಾಥ ಸಮಿತಿ ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ನೀಡಿತ್ತು. ಆದರೆ ಅದನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ನಿರ್ಲಕ್ಷ್ಯ ವಹಿಸಿದ್ದು ಈ ಬಗ್ಗೆ ಹೋರಾಟ ನಡೆಯಬೇಕಿದೆ. ಕೇರಳ ಸರ್ಕಾರ ತೆಂಗಿನ ಮರದಿಂದ ನೀರಾ ಇಳಿಸಲು ಮುಕ್ತ ಅವಕಾಶ ನೀಡಿದೆ. ನೀರಾ ಶೀತಲೀಕರಣ ವ್ಯವಸ್ಥೆಯಲ್ಲಿಟ್ಟು ಮಕ್ಕಳಿಂದ ಮುದುಕರವರೆಗೂ ಎಲ್ಲರೂ ಸೇವಿಸಬಹುದು. ಇದನ್ನು ಬಳಸುವುದರಿಂದ ಯಾವುದೇ ಪುಷ್ಟಿವರ್ಧಕಗಳು ದೇಹಕ್ಕೆ ಬೇಕಿಲ್ಲ. ನೀರಾದಿಂದಲೇ ಉಪಯುಕ್ತ ಪೌಷ್ಟಿಕಾಂಶ ದೇಹಕ್ಕೆ ದೊರೆಯುತ್ತದೆ. ಇದಕ್ಕೆ ರಾಜ್ಯ ಸರ್ಕಾರ ಅವಕಾಶ ಮಾಡಿಕೊಡಬೇಕು. ಎಳನೀರಿಗೆ ಬೇಡಿಕೆ ಇಲ್ಲದಿದ್ದರೆ ನಮ್ಮ ತೆಂಗಿನಕಾಯಿಯನ್ನು 2 ರೂ.ಗೂ ಕೇಳುವವರಿರುತ್ತಿರಲಿಲ್ಲ ಎಂದರು.
ಮೌನ ಪ್ರತಿಭಟನೆಯ ನಂತರ ಸಭೆಯಲ್ಲಿ ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ತಹಸೀಲ್ದಾರ್ ನಯೀಂಉನ್ನಿಸಾ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.ಜಿ.ಪಂ. ಮಾಜಿ ಸದಸ್ಯ ರಾಮಸ್ವಾಮೀಗೌಡ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮೂಡ್ಲಪ್ಪ, ದಲಿತ ಸಂಘಟನೆ ಮುಖಂಡ ಮಂಜುನಾಥ್, ಜಿ.ಪಂ.ಮಾಜಿ ಸದಸ್ಯ ಶಿವಪ್ರಕಾಶ್, ರೈತ ಸಂಘದ ಅಧ್ಯಕ್ಷರಾದ ರಂಗೇಗೌಡ ಮತ್ತು ಸುರೇಶ್, ತೆಂಗುಬೆಳೆಗಾರರ ಸಂಘದ ಅಧ್ಯಕ್ಷ ಯೋಗೇಶ್, ಮುಖಂಡರಾದ ಡಿ.ಟಿ.ಶ್ರೀನಿವಾಸ್, ದಲಿತ ಸಂಘಟನೆ ಮುಖಂಡರಾದ ಕಂಚಿನಕೋಟೆ ಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net