ರಸ್ತೆಗೆ ಉರುಳಿರುವ ಬಂಡೆ ತೆರವಿಗೆ ಒತ್ತಾಯ

22 HANUR 1 A
Published on

 ಹನೂರು: ಕಳೆದ 2 ದಿನಗಳಿಂದ ಸುರಿದ ಗಾಳಿ ಸಹಿತ ಮಳೆಗೆ ತಾಲೂಕಿನ ಮಲೆಮಹದೇಶ್ವರ ಬೆಟ್ಟ - ಪಾಲಾರ್ ಮಾರ್ಗದಲ್ಲಿ ರಸ್ತೆಗೆ ಉರುಳಿ ಬಿದ್ದಿರುವ ಬಂಡೆಗಳು ಹಾಗೂ ಮುರಿದಿರುವ ವಿದ್ಯುತ್ ಕಂಬವನ್ನು ತೆರೆವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಮಾರ್ಗವು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ, ಕಳೆದ 2 ದಿನಗಳಿಂದ ಸುರಿದ ಗಾಳಿ ಸಹಿತ ಮಳೆಗೆ ಈ ಮಾರ್ಗದ ಇಂಡಿ ಬಸವೇಶ್ವರ ದೇಗುಲ ಸಮೀಪ ಎರಡು ಬೃಹತ್ ಬಂಡೆಗಳು ಹಾಗೂ ಕೆಲವು ಕಡೆಗಳಲ್ಲೂ ಬಂಡೆಗಳು ರಸ್ತೆಗೆ ಉರುಳಿ ಬಿದ್ದಿವೆ. ಹಾಗೆಯೇ ವಿದ್ಯುತ್ ಕಂಬವೊಂದು ಮುರಿದಿದೆ. ಇದರಿಂದ ವಾಹನ ಸಂಚಾರಕ್ಕೆ ತೊಡುಕಾಗಿದೆ. ರಾತ್ರಿ ವೇಳೆಯಲ್ಲಂತೂ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಆದರೆ, ಸಂಬಂಧಪಟ್ಟ ಲೋಕೋಪಯೋಗಿ, ಅರಣ್ಯ ಹಾಗೂ ಸೆಸ್ಕ್ ಇಲಾಖೆಯ ಅಧಿಕಾರಿಗಳು ಬಂಡೆ ಹಾಗೂ ವಿದ್ಯುತ್ ಕಂಬವನ್ನು ತೆರೆವುಗೊಳಿಸುವಲ್ಲಿ ನಿರ್ಲಕ್ಷೃವಹಿಸಿದ್ದಾರೆ. ಇದರಿಂದ ಅನಾಹುತಕ್ಕೆ ಎಡೆಮಾಡಿಕೊಟ್ಟಿದೆ.

ಇದರ ದೃಶ್ಯವನ್ನು ಸಾಮಾಜಿಕ ಕಾರ್ಯಕರ್ತ ಪೊನ್ನಾಚಿ ರಾಜು ಅವರು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದ್ದು, ಏನಾದರೂ ಅನಾಹುತ ಸಂಭವಿಸಿದ್ದಲ್ಲಿ ಅಧಿಕಾರಿಗಳೇ ನೇರ ಹೊಣೆಗಾರರಾಗಬೇಕಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಅನಾಹುತ ಸಂಭವಿಸುವ ಮುನ್ನಾ ಈ ಬಗ್ಗೆ ಕೂಡಲೇ ಎಚ್ಚೆತ್ತು ಬಂಡೆ ಹಾಗೂ ವಿದ್ಯುತ್ ಕಂಬವನ್ನು ತೆರವುಗೊಳಿಸುವುದರ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net