

ಬೇಲೂರು: ಬೇಲೂರು ಪಟ್ಟಣದ ಮೂಡಿಗೆರೆ ರಸ್ತೆಯ ಅಕ್ಕಪಕ್ಕದ ಶಾಲೆಗಳ ಮುಂಭಾಗ ಇದ್ದ ರಸ್ತೆ ಉಬ್ಬು ತೆರವುಗೊಳಿಸಿದ ಪರಿಣಾಮ ವಾಹನಗಳ ದಟ್ಟಣೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಮತ್ತೆ ರಸ್ತೆ ಉಬ್ಬು ನಿರ್ಮಿಸುವಂತೆ ಒತ್ತಾಯಿಸಿ ಪಾಲಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೋಮವಾರ ಮುಡಿಗೆರೆ ರಸ್ತೆ ಬಳಿ ಪ್ರತಿಭಟನೆ ನಡೆಸಿದರು.
ಪಾಲಕರಾದ ಸೌಮ್ಯ ಆನಂದ್ ಮಾತನಾಡಿ, ಪಟ್ಟಣದ ಮೂಡಿಗೆರೆ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇಲ್ಲಿರುವ ನಾಲ್ಕೈದು ಶಾಲೆಗಳಿಗೆ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರುತ್ತಾರೆ. ಈ ಹಿಂದೆ ಇಲ್ಲಿ ಅಪಘಾತವಾದಾಗ ರಸ್ತೆಗೆ ಉಬ್ಬುಗಳನ್ನು ನಿರ್ಮಿಸಲಾಗಿತ್ತು. ಆದರೆ ಒಂದು ವಾರದ ಹಿಂದೆ ರಸ್ತೆಗೆ ಡಾಂಬಾರ್ ಹಾಕುವಾಗ ಉಬ್ಬುಗಳನ್ನು ತೆರವು ಮಾಡಲಾಗಿದೆ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಮತ್ತೆ ಶಾಲೆಗಳ ಸಮೀಪದ ರಸ್ತೆಗೆ ಉಬ್ಬುಗಳನ್ನು ನಿರ್ಮಿಸಬೇಕು. ಇಲ್ಲದಿದ್ದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶಾಂತಳಾ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಹರೀಶ್ ಮಾತನಾಡಿ, ಬೆಳಗ್ಗೆ ಹಾಗೂ ಸಂಜೆ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲೇ ಓಡಾಡಬೇಕಾದ ಅನಿವಾರ್ಯತೆ ಇದೆ. ಅಪಘಾತ ಸಂಭವಿಸುವ ಮುನ್ನ ಅಧಿಕಾರಿಗಳು ರಸ್ತೆ ಉಬ್ಬು ನಿರ್ಮಿಸಿ ಸಹಕಾರ ನೀಡಬೇಕು ಎಂದು ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷೆ ಭಾರತಿ ಅರುಣ್‌ಕುಮಾರ್, ಸಾಮಾಜಿಕ ಹೋರಾಟಗಾರ ನೂರ್ ಅಹಮದ್, ಇಬ್ಬೀಡು ಗ್ರಾಪಂ ಮಾಜಿ ಅಧ್ಯಕ್ಷ ಲೋಕೇಶ್, ಶಿಕ್ಷಕ ಪ್ರಶಾಂತ್, ವಿದ್ಯಾರ್ಥಿಗಳಿದ್ದರು.