ರಸ್ತೆಗಿಳಿಯದ ಸರ್ಕಾರಿ ಬಸ್‌ಗಳು, ಸಾರಿಗೆ ನೌಕರರ ಮುಷ್ಕರಕ್ಕೆ ಜಿಲ್ಲೆ ತತ್ತರ, ಪ್ರಯಾಣಿಕರ ಪರದಾಟ

07 Nela ph 05 KSRTC Bus Depo
Published on

ಬೆಂಗಳೂರು ಗ್ರಾಮಾಂತರ: 6 ವೇತನ ಆಯೋಗ ಶಿಫಾರಸು ಜಾರಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬುಧವಾರ ಆರಂಭವಾದ ಸಾರಿಗೆ ನೌಕರರ ಮುಷ್ಕರ ಗ್ರಾಮಾಂತರ ಜಿಲ್ಲೆಗೂ ತಟ್ಟಿದ್ದು, ಇಡೀ ದಿನ ಪ್ರಯಾಣಿಕರ ಪರದಾಟದ ದೃಶ್ಯಗಳು ಕಂಡುಬಂದವು.

ಯಾವುದೇ ಡಿಪೋಗಳಿಂದ ಸರ್ಕಾರಿ ಬಸ್‌ಗಳು ರಸ್ತೆಗಿಳಿಯದ ಹಿನ್ನೆಲೆಯಲ್ಲಿ ಕೆಸ್ಸಾರ್ಟಿಸಿ ನಿಲ್ದಾಣಗಳು ಬಿಕೋ ಎಂದವು. ಬಸ್‌ಗಳ ಬರುವಿಕೆಗೆ ಕಾದು ಸುಸ್ತಾದ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋದರು. ಮಂಗಳವಾರ ಮಧ್ಯಾಹ್ನದಿಂದಲೇ ಜಿಲ್ಲೆಯಾದ್ಯಂತ ಮುಷ್ಕರದ ಬಿಸಿ ಕಾಣಿಸಿಕೊಂಡಿತ್ತು. ಬುಧವಾರ ಮುಂಜಾನೆಯಿಂದಲೇ ಸರ್ಕಾರಿ ಬಸ್‌ಗಳ ದರ್ಶನವಾಗಲಿಲ್ಲ. ಪ್ರತಿನಿತ್ಯ ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳಿಂದ ಉದ್ಯೋಗಕ್ಕಾಗಿ ಬೆಂಗಳೂರು ಕಡೆ ಸಾಗುವ ಪ್ರಯಾಣಿಕರು ಹೆಚ್ಚು ಸಂಕಷ್ಟ ಎದುರಿಸಿದರು.

ಹೊರಜಿಲ್ಲೆಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಖಾಸಗಿ ಬಸ್‌ಗಳಲ್ಲಿ ದುಪ್ಪಟ್ಟು ಹಣ ತೆತ್ತು ಪ್ರಯಾಣಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿತ್ತು. ದೇವನಹಳ್ಳಿಯ ಜಿಲ್ಲಾಡಳಿತ ಭವನ ಸೇರಿ ತಾಲೂಕು ಕಚೇರಿಗಳು ವಿವಿಧ ಸರ್ಕಾರಿ ಕಚೇರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಯ ಗೈರುಹಾಜರಿ ಕಂಡುಬಂತು.

ಕರೊನಾ ಹರಡುವಿಕೆಗೆ ದಾರಿ: ಒಂದೆಡೆ ಕರೊನಾ ನಿಯಮ ಪಾಲನೆಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗಿರುವ ಜಿಲ್ಲಾಡಳಿತಕ್ಕೆ ಬಸ್ ಮುಷ್ಕರ ಸಾಕಷ್ಟು ತಲೆನೋವು ತರಿಸಿದೆ. ಸರ್ಕಾರಿ ಬಸ್‌ಗಳಿಲ್ಲದೆ ಖಾಸಗಿ ಬಸ್‌ಗಳು, ಆಟೋ, ಸರಕುಸಾಗಣೆ ವಾಹನ ಸೇರಿ ಸಿಕ್ಕ ಸಿಕ್ಕ ವಾಹನಗಳಲ್ಲಿ ಪ್ರಯಾಣಿಕರು ಜೋತುಬಿದ್ದು ಸಾಗುವ ದೃಶ್ಯ ಕಂಡುಬಂತು. ಬಸ್‌ಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಶೇ.50 ಪ್ರಯಾಣಿಕರಿಗೆ ಪ್ರವೇಶ ಮುಂತಾದ ನಿಯಮಗಳು ಕಾಣೆಯಾಗಿದ್ದವು. ಮಾಸ್ಕ್ ಹಾಕದವರಿಗೆ ದಂಡ ವಿಧಿಸುತ್ತಿದ್ದ ಪೊಲೀಸರೇ ಹೇಗಾದರೂ ಮಾಡಿ ಪ್ರಯಾಣಿಕರನ್ನು ಸಿಕ್ಕ ವಾಹನಗಳಲ್ಲಿ ಕಳುಹಿಸಿಕೊಟ್ಟರಾಯಿತು ಎಂಬ ಧಾವಂತಕ್ಕೆ ಬಿದ್ದಂತೆ ವರ್ತಿಸಿದರು.

ದುರಸ್ತಿ ಗಾಡಿಗಳೂ ರಸ್ತೆಗೆ: ಸ್ಥಳೀಯ ಆಟೋಗಳು, ಟೆಂಪೋ, ಮಿನಿಬಸ್ ಸೇರಿ ಅನೇಕ ಬಸ್‌ಗಳು ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ಕಂಡುಬಂತು. ದುರಸ್ತಿಗೆ ಬಂದಿರುವ ಹಳೇ ವಾಹನಗಳು ಸಹ ರಸ್ತೆಗಿಳಿದಿದ್ದವು. ಯಾವುದೇ ಅಪಾಯ ಲೆಕ್ಕಿಸದೆ ಪ್ರಯಾಣಿಕರು ಸಹ ಗುರಿ ತಲುಪಿದರೆ ಸಾಕು ಎಂಬಂತೆ ಸಿಕ್ಕ ಸಿಕ್ಕ ವಾಹಗಳನ್ನೇರಿ ಸಾಗುವಂತಾಯಿತು.

ದೊಡ್ಡಬಳ್ಳಾಪುರದಲ್ಲಿ ಬಂದ್ ಯಶಸ್ಸಿ: ಮುಷ್ಕರಕ್ಕೆ ತಾಲೂಕಿನಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಇಲ್ಲಿನ ಕೆಎಸ್‌ಆರ್‌ಟಿಸಿ ಡಿಪೋದಿಂದ ಯಾವುದೇ ಬಸ್ ಬುಧವಾರ ರಸ್ತೆಗೆ ಇಳಿಯಲಿಲ್ಲ. ಆಟೋರಿಕ್ಷಾ ಸೇರಿ ಖಾಸಗಿ ವಾಹನಗಳ ಚಾಲಕರು ಊರಿಗೆ ಕರೆದೊಯ್ಯಲು ಹೆಚ್ಚಿನ ಹಣ ಕೇಳುತ್ತಿರುವ ಆರೋಪ ಕೇಳಿ ಬಂತು.ಖಾಸಗಿ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿದಿದ್ದವು. ಇದನ್ನೇ ಬಂಡವಾಳ ಮಾಡಿಕೊಂಡ ಅವರು ಹೆಚ್ಚಿನ ಟಿಕೆಟ್ ದರ ವಸೂಲಿ ಮಾಡಿದರು ಎಂಬ ಆಕ್ರೋಶ ವ್ಯಕ್ತವಾಯಿತು.

ನಮ್ಮ ಡಿಪೋ ವ್ಯಾಪ್ತಿಯ ಎಲ್ಲ ಚಾಲಕರು, ನಿರ್ವಾಹಕರು ಹಾಗೂ ಮೆಕಾನಿಕ್‌ಗಳಿಗೆ ನೋಟಿಸ್ ನೀಡಿ ಕೆಲಸಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ. ಸರ್ಕಾರದ ಸೂಚನೆಯಂತೆ ನೋ ವರ್ಕ್ ನೋ ಪೇಮೆಂಟ್ ಎಂಬ ನೀತಿಯನ್ವಯ ಕೆಲಸಕ್ಕೆ ಬಾರದವರಿಗೆ ಸಂಬಳ ಕಡಿತಗೊಳಿಸಲಾಗುವುದು. ಸರ್ಕಾರದ ಸೂಚನೆಯಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಆನಂದ್, ದೊಡ್ಡಬಳ್ಳಾಪುರ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net