ರಸ್ತೆಗಿಳಿದಿಲ್ಲ ತ್ಯಾಜ್ಯ ವಿಲೇವಾರಿ ವಾಹನ

27-RNR-01
Published on

ರಾಣೆಬೆನ್ನೂರ: ಕೇಂದ್ರ ಸರ್ಕಾರವು ಸ್ವಚ್ಛ ಭಾರತ ಯೋಜನೆಯಡಿ ನಗರದ ತ್ಯಾಜ್ಯ ವಿಲೇವಾರಿಗಾಗಿ ಇಲ್ಲಿಯ ನಗರಸಭೆಗೆ 19 ಆಟೋ ಟಿಪ್ಪರ್ ನೀಡಿದೆ. ಆದರೆ, ಏಳು ತಿಂಗಳು ಗತಿಸಿದರೂ ವಾಹನಗಳ ಓಡಾಟಕ್ಕೆ ಇನ್ನೂ ಚಾಲನೆ ಸಿಕ್ಕಿಲ್ಲ.

ಒಂದು ಕೋಟಿ ರೂಪಾಯಿಗೂ ಅಧಿಕ ವೆಚ್ಚದ ಈ ವಾಹನಗಳನ್ನು ಜನವರಿಯಲ್ಲೇ ನಗರಸಭೆಗೆ ಹಸ್ತಾಂತರಿಸಲಾಗಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯಂದಾಗಿ ವಾಹನಗಳು ನಿಂತಲ್ಲೇ ನಿಂತುಕೊಂಡಿವೆ.

ನೂತನವಾಗಿ ಬಂದಿರುವ ಆಟೋ ಟಿಪ್ಪರ್​ಗಳಿಗೆ ನಗರಸಭೆ ವಿಮೆ ಹಾಗೂ ಆರ್​ಟಿಒ ಪಾಸಿಂಗ್ ಮಾಡಿಸಿಕೊಂಡಿದೆ. ಚಾಲಕರಿಗಾಗಿ ಟೆಂಡರ್ ಕರೆದಿದ್ದು, ಖಾಸಗಿ ಕಂಪನಿಯೊಂದು ಗುತ್ತಿಗೆ ಪಡೆಯಲು ಮುಂದೆ ಬಂದಿದೆ. ಈ ಬಗ್ಗೆ ಅನುಮೋದನೆಗಾಗಿ ಕಳೆದ ವಾರ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇನ್ನೂ ಅನುಮೋದನೆ ದೊರೆತಿಲ್ಲ. ಇತ್ತ ನಗರಸಭೆಯವರು ವಾಹನಗಳಿಗೆ ಈವರೆಗೂ ನಂಬರ್ ಪ್ಲೇಟ್ ಸಹ ಅಳವಡಿಸಿಲ್ಲ. ಜಿಪಿಎಸ್, ಮೈಕ್ ಸೆಟ್ ಸೇರಿ ತ್ಯಾಜ್ಯ ವಿಲೇವಾರಿಗೆ ಸಿದ್ಧವಾಗುವ ಯಾವ ಕಾರ್ಯವನ್ನೂ ಮಾಡಿಲ್ಲ.

80 ಲಕ್ಷ ರೂ. ಖರ್ಚಿಗೆ ಮುಕ್ತಿ: ನಗರಸಭೆಯಲ್ಲಿ ತ್ಯಾಜ್ಯ ವಿಲೇವಾರಿಗಾಗಿ ಒಟ್ಟು 27 ಆಟೋ ಟಿಪ್ಪರ್​ಗಳಿದ್ದು, ಅವುಗಳಲ್ಲಿ 5 ಮಾತ್ರ ಸ್ವಂತ ವಾಹನಗಳಿವೆ. ಇನ್ನುಳಿದ 22 ವಾಹನಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆದುಕೊಂಡಿದ್ದು, ಇದಕ್ಕಾಗಿ ವರ್ಷಕ್ಕೆ 80 ಲಕ್ಷ ರೂ. ಬಾಡಿಗೆ ನೀಡಲಾಗುತ್ತಿದೆ. ಇದೀಗ ಕೇಂದ್ರ ಸರ್ಕಾರ ನೀಡಿರುವ 19 ಹಾಗೂ ಮೊದಲಿನ 5 ಸೇರಿ ಒಟ್ಟು 24 ವಾಹನಗಳು ನಗರಸಭೆಗೆ ಸೇರಲಿವೆ. 35 ವಾರ್ಡ್​ಗಳನ್ನು ಹೊಂದಿರುವ ನಗರಸಭೆಗೆ ತ್ಯಾಜ್ಯ ವಿಲೇವಾರಿ ಮಾಡಲು ಇಷ್ಟು ವಾಹನ ಸಾಕು. ಆದ್ದರಿಂದ ಅಧಿಕಾರಿಗಳು ಕೂಡಲೆ ಸೂಕ್ತ ಕ್ರಮ ಕೈಗೊಂಡು ತ್ಯಾಜ್ಯ ವಿಲೇವಾರಿ ವಾಹನಗಳಿಗೆ ಆದಷ್ಟು ಬೇಗ ಚಾಲನೆ ಕೊಡಬೇಕಿದೆ.

ಕೇಂದ್ರ ಸರ್ಕಾರ ಸ್ವಚ್ಛ ಭಾರತ ಯೋಜನೆಯಡಿ ತ್ಯಾಜ್ಯ ವಿಲೇವಾರಿಗೆ ಬೇಕಾದ ಎಲ್ಲ ಸೌಕರ್ಯ ಒಳಗೊಂಡ ವಾಹನಗಳನ್ನು ನೀಡಿದೆ. ಆದರೆ, ಅವುಗಳ ಬಳಕೆ ಮಾಡಿಕೊಳ್ಳಬೇಕಾದ ನಗರಸಭೆ ತಿಂಗಳುಗಟ್ಟಲೇ ಮೂಲೆಯಲ್ಲಿ ನಿಲ್ಲಿಸಿರುವುದು ಸೂಕ್ತವಲ್ಲ. ಈ ಬಗ್ಗೆ ಆಯುಕ್ತರು ಕ್ರಮ ಜರುಗಿಸಿ, ವಾಹನಗಳಿಗೆ ಚಾಲನೆ ನೀಡಬೇಕು. | ಮಹೇಶಪ್ಪ ಎಚ್. ಸ್ಥಳೀಯ ನಿವಾಸಿ ನಗರಸಭೆಗೆ ವಾಹನಗಳು ಬಂದ ಮರು ತಿಂಗಳಿಂದಲೇ ಕರೊನಾ ಲಾಕ್​ಡೌನ್ ಎದುರಾಯಿತು. ಈ ಹಿನ್ನೆಲೆಯಲ್ಲಿ ಕೊಂಚ ವಿಳಂಬವಾಗಿದೆ. ಇದೀಗ ಚಾಲಕರ ಗುತ್ತಿಗೆ ಸಹ ಮುಗಿದಿದ್ದು, ಅನುಮೋದನೆಗೆ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅಲ್ಲಿಂದ ಅನುಮೋದನೆ ಬಂದ ಕೂಡಲೆ ನೂತನ ವಾಹನ ಬಳಕೆಗೆ ಚಾಲನೆ ನೀಡಲಾಗುವುದು. | ಡಾ. ಎನ್. ಮಹಾಂತೇಶ ನಗರಸಭೆ ಆಯುಕ್ತ ರಾಣೆಬೆನ್ನೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net