

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿನ 431.70 ಕಿ.ಮೀ ಉದ್ದದ ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಯನ್ನಾಗಿ, 199.90 ಕಿ.ಮೀ ಉದ್ದ ಜಿಲ್ಲಾ ಮುಖ್ಯ ರಸ್ತೆಗಳನ್ನು ರಾಜ್ಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಅಸ್ತು ಎಂದಿದೆ. ವಿವಿಧ ತಾಲೂಕುಗಳನ್ನು ಸಂಪರ್ಕಿಸುವ ಗ್ರಾಮೀಣ ರಸ್ತೆ ಮತ್ತು ನೆರೆ ರಾಜ್ಯ ಗಡಿ ಪ್ರದೇಶಗಳನ್ನು ಸಂಪರ್ಕಿಸುವ ಜಿಲ್ಲಾ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಲು ಲೋಕೋಪಯೋಗಿ ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಸರ್ಕಾರ ಅನುಮೋದನೆ ನೀಡಿದೆ.
ಮುಂಬರುವ ದಿನಗಳಲ್ಲಿ ಹೊಸದಾಗಿ ಘೋಷಿಸಿರುವ ರಾಜ್ಯ ಮತ್ತು ಜಿಲ್ಲಾಮಟ್ಟದ 631.60 ಕಿ.ಮೀ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಚಾಲನೆ ನೀಡಲಿದ್ದು ರಾಜ್ಯ, ಜಿಲ್ಲಾ ಮತ್ತು ತಾಲೂಕುಗಳ ತ್ವರಿತ ರಸ್ತೆ ಸಂಪರ್ಕ ಮತ್ತು ಸಂಚಾರ ವ್ಯವಸ್ಥೆಗೆ ಅನುಕೂಲವಾಗುತ್ತದೆ.
ಹೆದ್ದಾರಿಯಾಗುವ ಜಿಲ್ಲಾ ರಸ್ತೆ : ನಂದಿ ಗ್ರಾಮದಿಂದ ನಂದಿ-ವಿಜಯಪುರ ಮಾರ್ಗ (16 ಕಿ.ಮೀ) ವಿಜಯಪುರ-ಶಿಡ್ಲಘಟ್ಟ (16 ಕಿ.ಮೀ) ಶಿಡ್ಲಘಟ್ಟ-ದಿಬ್ಬೂರಹಳ್ಳಿ (23 ಕಿ.ಮೀ) ದಿಬ್ಬೂರಹಳ್ಳಿಯಿಂದ-ಇ ತಿಮ್ಮಸಂದ್ರ (11 ಕಿ.ಮೀ)
ಇ ತಿಮ್ಮಸಂದ್ರದಿಂದ-ಪಾಳ್ಯ ಕೆರೆ ಹಾಗೂ ಚೇಳೂರವರೆಗೆ (30 ಕಿ.ಮೀ) ಚಿಂತಾಮಣಿಯಿಂದ ಗೌರಿಬಿದನೂರು ರಸ್ತೆ ವಯಾ ಚೇಳೂರು, ಬಾಗೇಪಲ್ಲಿ ಯಲ್ಲೋಡು ಮೂಲಕ ಮಲ್ಲೇನಹಳ್ಳಿ ಕ್ರಾಸ್‌ನಿಂದ ವಾಟದಹೊಸಹಳ್ಳಿ (103 ಕಿ.ಮೀ)
ಜಿಲ್ಲಾ ಮುಖ್ಯರಸ್ತೆಯಾಗುವ ಗ್ರಾಮೀಣ ರಸ್ತೆ : ಚಿಕ್ಕಬಳ್ಳಾಪುರ ತಾಲೂಕಿನ 28.80 ಕಿ.ಮೀ, ಶಿಡ್ಲಘಟ್ಟ ತಾಲೂಕಿನ 34 ಕಿ.ಮೀ ಗೌರಿಬಿದನೂರು ತಾಲೂಕಿನಲ್ಲಿ 77 ಕಿ.ಮೀ, ಬಾಗೇಪಲ್ಲಿ ತಾಲೂಕಿನಲ್ಲಿ 124.10 ಕಿ.ಮೀ , ಗುಡಿಬಂಡೆ ತಾಲೂಕಿನಲ್ಲಿ 53.20 ಕಿ.ಮೀ, ಚಿಂತಾಮಣಿ ತಾಲೂಕಿನಲ್ಲಿ 114.60 ಕಿ.ಮೀ