

ಕಡೂರು: ಪಟ್ಟಣ ವೇಗವಾಗಿ ಬೆಳೆಯುತ್ತಿದ್ದು, ಪುರಸಭೆ ವ್ಯಾಪ್ತಿಗೂ ಮೀರಿ ಬರುವಂತಹ ಗ್ರಾಮೀಣ ರಸ್ತೆ, ಹೊರವಲಯಗಳ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ಒತ್ತು ಕೊಡಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಪಟ್ಟಣದ ಹಳೇ ಸಂತೆ ಮೈದಾನದ ಸಂತೆಕೆರೆ ಏರಿಯ ಮೇಲಿನ ಕೋಡಿಯಿಂದ ಕಟ್ಟೆಹೊಳೆ ತನಕ 1 ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಭಾನುವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಹಲವಾರು ವರ್ಷಗಳಿಂದ ಸ್ಥಳೀಯ ರೈತರೇ ಹಣ ಭರಿಸಿಕೊಂಡು ಸಂತೆಕೆರೆ ಏರಿ ರಸ್ತೆಯ ಗುಂಡಿಗಳನ್ನು ಮುಚ್ಚುತ್ತಿದ್ದರು. ತೋಟಗಳಿಗೆ ಹೋಗಲು ರಸ್ತೆ ಇಲ್ಲದೆ ಪರಿತಪಿಸುತ್ತಿದ್ದುದ್ದನ್ನು ನಾನು ಒಬ್ಬ ರೈತನ ಮಗನಾಗಿ ಮನವರಿಕೆ ಮಾಡಿಕೊಂಡು ಈ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದ್ದೇನೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನದ ಬಿಡುಗಡೆಯಾಗಿರುವ ಜತೆಗೆ ಹೆಚ್ಚುವರಿಯಾಗಿ ಇನ್ನೂ 50 ಲಕ್ಷ ಒದಗಿಸಲಿದ್ದು, ಸುಮಾರು 2 ಕಿ.ಮೀ ಉದ್ದ, 5 ಮೀಟರ್ ಅಗಲವುಳ್ಳ ಗುಣಮಟ್ಟದ ರಸ್ತೆ ನಿರ್ಮಾಣವಾಗಲಿದೆ. ಚಿಕ್ಕಂಗಳ ಕೆರೆ ಏರಿ ದುರಸ್ತಿಗೆ ಮುಂದಿನ ದಿನಗಳಲ್ಲಿ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಕಡೂರು ಪುರಸಭೆ ವ್ಯಾಪ್ತಿ ಮೀರಿ ಬರುವಂತಹ ಮಲ್ಲೇಶ್ವರದ ಮಾರುತಿ ಬಡಾವಣೆ, ಬಿಜಿಎಸ್ ಕಾಲೇಜು ಮುಂಭಾಗದ ರಸ್ತೆ, ಮಂಗಾರಮ್ಮನ ದೇವಾಲಯ ಸಂಪರ್ಕಿಸುವ ರಸ್ತೆಗಳಿಗೆ ಶಾಸಕರ ಅನುದಾನದಲ್ಲಿ ಈಗಾಗಲೇ ರಸ್ತೆ ಕಾಮಗಾರಿಗೆ ಹಣ ನೀಡಿದ್ದು ಪಟ್ಟಣಕ್ಕೆ ಗ್ರಾಮೀಣ ಭಾಗಗಳಿಂದ ಸಂಪರ್ಕಿಸುವ ರಸ್ತೆಗಳಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದರು.
ಪುರಸಭೆ ಮಾಜಿ ಉಪಾಧ್ಯಕ್ಷ ಮಂಜುನಾಥ್ ಮಾತನಾಡಿ, ರೈತರ ಅನೇಕ ವರ್ಷಗಳ ಬೇಡಿಕೆಯನ್ನು ಶಾಸಕ ಆನಂದ್ ಪೂರೈಸಿದ್ದಾರೆ. ಕ್ಷೇತ್ರದ ಪ್ರಗತಿಗೆ ಆದ್ಯತೆ ನೀಡಿದ್ದಾರೆ ಎಂದರು.
ಪುರಸಭೆ ಸದಸ್ಯ ಮಂಡಿ ಇಕ್ಬಾಲ್ ಮಾತನಾಡಿ, ಸಂತೆಕರೆ ವ್ಯಾಪ್ತಿಯು ನನ್ನ ವಾರ್ಡ್‌ನ ಪಕ್ಕದಲ್ಲಿಯೇ ಇದ್ದು ಶಾಸಕರು ಈ ಭಾಗದ ತೋಟಗಳ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ. ಜತೆಗೆ ಪಕ್ಕದಲ್ಲಿಯೇ ಇರುವ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆಯನ್ನು ಸಹ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.
ರೈತರಾದ ಮಲ್ಲಿಕಾರ್ಜುನ್, ಬೀರಪ್ಪ, ಮಲ್ಲಿಕಾರ್ಜುನ್, ಶೇಖರಪ್ಪ, ಸೋಮನಾಥ್, ಮನು, ರಾಮಣ್ಣ, ರಘು, ಕುಮಾರ ಒಡೆಯರ್, ಹುಚ್ಚಪ್ಪ, ಭೂಸೇನಾ ನಿಗಮದ ಎಇಇ ಅಶ್ವಿನಿ, ಗಿರೀಶ್ ಇತರರಿದ್ದರು.