

ಮಲ್ಲು ಕಳಸಾಪುರ ಲಕ್ಷ್ಮೇಶ್ವರ:
ತಾಲೂಕಿನಲ್ಲಿನ ಗ್ರಾಮೀಣ ರಸ್ತೆಗಳು ಮತ್ತು ರೈತ ಸಂಪರ್ಕ ರಸ್ತೆಗಳ ಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ಜನರ ಗೋಳು ಹೇಳತೀರದಾಗಿದೆ. ಗ್ರಾಮೀಣ ಜನರು ಲಕ್ಷ್ಮೇಶ್ವರಕ್ಕೆ ಸುತ್ತು ಬಳಸಿ ಬರಲು ಪ್ರಯತ್ನಿಸಿದರೂ ಅತ್ತದರಿ ಇತ್ತ ಪುಲಿ ಎಂಬಂತಾಗಿವೆ ಎಲ್ಲ ರಸ್ತೆಗಳ ಸ್ಥಿತಿ.
ಲಕ್ಷ್ಮೇಶ್ವರ- ಯತ್ನಳ್ಳಿ ಸಂರ್ಪಸುವ 14 ಕಿ.ಮೀ. ರಸ್ತೆ ಸ್ಥಿತಿ ಅಸ್ಥಿಪಂಜರದಂತಾಗಿದ್ದು, ಅನಿವಾರ್ಯತೆಗಳ ನಡುವೆ ನಿತ್ಯ ಸಂಚರಿಸುವ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗುತ್ತಾರೆ. ರೈತರ ಗೋಳಂತೂ ಹೇಳತೀರದಾಗಿದೆ.
ಒಟ್ಟು 14 ಕಿ.ಮೀ. ಅಂತರದ ಈ ರಸ್ತೆಯಲ್ಲಿ ಯತ್ನಳ್ಳಿ ಕಡೆ 2 ಕಿ.ಮೀ-ಲಕ್ಷ್ಮೇಶ್ವರ ಕಡೆ 2 ಕಿ.ಮೀ. ಡಾಂಬರೀಕರಣದ ರಸ್ತೆಗೆ ಇತ್ತೀಚೆಗೆ ಬೇಕಾಬಿಟ್ಟು ಗುಂಡಿಗೆ ತೇಪೆ ಹಾಕುವ ಕೆಲಸ ಮಾಡಿದ್ದು ಬಿಟ್ಟರೆ ಉಳಿದ ರಸ್ತೆಗೆ ಹಲವು ವರ್ಷಗಳಿಂದ ಹಿಡಿ ಮಣ್ಣೂ ಹಾಕಿಲ್ಲ. ಈ ರಸ್ತೆಯದ್ದಕ್ಕೂ ತಗ್ಗು ಗುಂಡಿ, ಕಲ್ಲುಗಳು ಎದ್ದು ರಸ್ತೆ ಸಂಚಾರ ನಡುಕ ಹುಟ್ಟಿಸುವಂತಿದೆ.
ಸುತ್ತುವರಿದು ಹೋಗಲು ಅವಕಾಶವಿರುವ ಎಲ್ಲ ರಸ್ತೆಗಳೂ ಹಾಳಾಗಿದ್ದು ಎದ್ದು ಬಿದ್ದು ಸಾಗುವ ಈ ರಸ್ತೆಯ ನಡು ಮಧ್ಯದಲ್ಲಿಯೇ ವಾಹನಗಳು ಕೆಟ್ಟುನಿಲ್ಲುವ ಪರಿಸ್ಥಿತಿ ಸಾಮಾನ್ಯವಾಗಿದೆ. ಲಕ್ಷ್ಮೇಶ್ವರ- ಯತ್ನಳ್ಳಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ಗಳ ಸಂಪರ್ಕವೂ ಕಡಿತಗೊಂಡಿದೆ. ಮಾಡಳ್ಳಿ ಮತ್ತು ಲಕ್ಷ್ಮೇಶ್ವರ ಭಾಗದ ಸಾವಿರಾರು ರೈತರು ತಮ್ಮ ಜಮೀನುಗಳಿಗೆ ಕೃಷಿ ಚಟುಟವಟಿಕೆ ಹೋಗಲು ಬೇಸರ ಮಾಡಿಕೊಳ್ಳುವಂತಾಗಿದೆ.
ಚಕ್ಕಡಿವೂ ಹೋಗದಂತ ರಸ್ತೆ: ಲಕ್ಷ್ಮೇಶ್ವರ- ಯತ್ನಳ್ಳಿ ರಸ್ತೆ ಸಂಪೂರ್ಣ ಹಾಳಾಗಿದ್ದರೂ ರಸ್ತೆಗೆ ಹಿಡಿಮಣ್ಣೂ ಹಾಕಲು ಯಾರೂ ದಿಕ್ಕಿಲ್ಲದಂತಾಗಿದೆ. ಈ ಭಾಗದ ರೈತರ ಗೋಳು ಅರಣ್ಯರೋಧನವಾಗಿದೆ. ಎತ್ತು- ಚಕ್ಕಡಿ ಹೋಗದಂತಾಗಿದ್ದು, ಎತ್ತಿನ ಕಾಲುಗಳ ಪಾದದಡಿ ಹಾಕಿಸಿದ ನಾಲು (ಕಬ್ಬಿಣ ಪಟ್ಟಿ) ಸಹ ಕಿತ್ತು ಎತ್ತುಗಳು ನಡೆಯಲಾರದೇ ಕಷ್ಟಪಡುತ್ತವೆ. ಇದರಿಂದ ರೈತರು ಮನೆಗೆ ಬರಲಾರದೇ ಕೃಷಿ ಕೆಲಸ ಮುಗಿಯುವವರೆಗೂ ಹೊಲದಲ್ಲಿಯೇ ವಾಸ್ತವ್ಯ ಮಾಡುತ್ತಿದ್ದಾರೆ.
ಲಕ್ಷ್ಮೇಶ್ವರ- ಯತ್ನಳ್ಳಿ ಮಾರ್ಗದ ಕೆಲ ಕಡೆ ಪ್ಯಾಚ್ ವರ್ಕ್ ಮಾಡಲಾಗಿದೆ. ಮಧ್ಯದ ಐದಾರು ಕಿ.ಮೀ. ರಸ್ತೆ ಗುಂಡಿ ಮುಚ್ಚಲಾರದಷ್ಟು ಹದಗೆಟ್ಟಿದೆ. ತಾಲೂಕಿನಲ್ಲಿ ಇಂತಹ 150 ಕಿ.ಮೀ. ರಸ್ತೆಯನ್ನು ಮರು ಡಾಂಬರೀಕರಣಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದರೆ ಆಧ್ಯತೆಯ ಮೇರೆಗೆ ಡಾಂಬರೀಕರಣ ಮಾಡಲಾಗುವುದು. | ಫಕೀರೇಶ ತಿಮ್ಮಾಪುರ, ಪಿಡಬ್ಲ್ಯುಡಿ ಎಇಇ