ರಸ್ತೆ ಸುರಕ್ಷತೆಯ ಅರಿವು ಪ್ರತಿಯೊಬ್ಬರಿಗೂ ಅಗತ್ಯ

IMG-20250115-WA0009
Published on

ಚಾಮರಾಜನಗರ: ಪ್ರತಿಯೊಂದು ಜೀವವು ಅಮೂಲ್ಯವಾಗಿರುವುದರಿಂದ ರಸ್ತೆ ಸುರಕ್ಷತೆಯ ವ್ಯಾಪಕ ಅರಿವು, ಚಾಲನಾ ಜಾಗರೂಕತೆ ವಾಹನ ಚಲಾಯಿಸುವ ಪ್ರತಿಯೊಬ್ಬರಿಗೂ ಅವಶ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತ ತಿಳಿಸಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಸಂಚಾರಿ ಪೊಲೀಸ್ ಠಾಣೆ ಹಾಗೂ ರೋಟರಿ ಸಿಲ್ಕ್ ಸಿಟಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ 2024ರ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೈನಂದಿನ ಜೀವನದಲ್ಲಿ ಕೆಲವರನ್ನು ಹೊರತುಪಡಿಸಿ ಉಳಿದೆಲ್ಲರು ವಾಹನ ಚಾಲನೆಯಲ್ಲಿ ತೊಡಗಿರುವುದು ಇತ್ತೀಚೆಗೆ ಸರ್ವೇಸಾಮಾನ್ಯವಾಗಿದೆ. ವಾಹನಗಳು ಸಾಕಷ್ಟು ಸಂಖ್ಯೆಯಲ್ಲಿ ರಸ್ತೆಗಿಳಿಯುತ್ತಿರುವುದರಿಂದ ಅಪಘಾತಗಳು ಹೆಚ್ಚಾಗಿವೆ. ರಸ್ತೆ ಅಪಘಾತಗಳನ್ನು ವ್ಯಾಪಕವಾಗಿ ತಡೆಯುವ ನಿಟ್ಟಿನಲ್ಲಿ ಪ್ರತಿವರ್ಷ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡು ಜನಸಾಮಾನ್ಯರಿಗೆ ಅರಿವು ಮೂಡಿಸಲಾಗುತ್ತಿದೆ. ಮುಖ್ಯವಾಗಿ ರಸ್ತೆ ಸುರಕ್ಷತೆಯ ಅರಿವು ಶಾಲಾ ವಿದ್ಯಾರ್ಥಿಗಳಿಗೆ ಅತೀ ಅಗತ್ಯವಾಗಿದೆ ಎಂದರು.

ದೇಶದಲ್ಲಿ ಪ್ರತಿವರ್ಷ ರಸ್ತೆ ಅಪಘಾತಗಳಿಂದ 1 ಲಕ್ಷದ 84 ಸಾವಿರಕ್ಕೂ ಅಧಿಕ ಮಂದಿ ಮರಣ ಹೊಂದುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ವರ್ಷ 234 ಅಪಘಾತ ಪ್ರಕರಣಗಳಲ್ಲಿ 256 ಮಂದಿ ಸಾವನಪ್ಪಿದ್ದಾರೆ. ವಾಹನ ಚಾಲನಾ ಸಮಯದಲ್ಲಿ ಅಜಾಗರೂಕತೆಯಿಂದ ಹೆಲ್ಮೆಟ್, ಸೀಟ್‍ಬೆಲ್ಟ್ ಹಾಕದಿರುವುದು, ಗಮನ ಬೇರೆಡೆ ಇರುವುದು ಹಾಗೂ ಮೊಬೈಲ್ ಬಳಕೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಈ ನಿಟ್ಟಿನಲ್ಲಿ ಪ್ರಜ್ಞಾವಂತ ನಾಗರಿಕರು ಎಚ್ಚರಿಕೆಯಿಂದ ರಸ್ತೆ ಸುರಕ್ಷತಾ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕ ಅಶೋಕ್‍ಕುಮಾರ್, ಪ್ರಾದೇಶಿಕ ಸಾರಿಗೆ ಇಲಾಖೆಯ ನಿರೀಕ್ಷಕ ಅಸಾದುಲ್ಲಾ ಬೇಗ್, ಡಿವೈಎಸ್‍ಪಿ ಲಕ್ಷ್ಮಯ್ಯ, ಪೊಲೀಸ್ ಅಧಿಕಾರಿಗಳು, ವಿವಿಧ ಕಾಲೇಜುಗಳ ಪ್ರಾಚಾರ್ಯರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಆಟೋ ಚಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net