ಚಾಮರಾಜನಗರ: ಜಿಲ್ಲಾ ವ್ಯಾಪ್ತಿಗೆ ಬರುವ ರಾಷ್ಟ್ರೀಯ ಹೆದ್ದಾರಿ ಇನ್ನಿತರ ಮುಖ್ಯ ಹೆದ್ದಾರಿಗಳಲ್ಲಿ ಅಪಘಾತಗಳನ್ನು ತಡೆಯಲು ಪರಿಣಾಮಕಾರಿಯಾಗಿ ಸುರಕ್ಷತಾ ವ್ಯವಸ್ಥೆಗಳ ಅಳವಡಿಕೆಗೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿ ವಿವರ ನೀಡಲಾಗಿದೆ. ಇಂತಹ ಸ್ಥಳಗಳಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಸಂಪೂರ್ಣವಾಗಿ ತಿಳಿಸಲಾಗಿದೆ. ಆದರೂ ವಿಳಂಬ ಧೋರಣೆ ಕಂಡು ಬಂದಿದೆ. ಸುರಕ್ಷತಾ ಕ್ರಮಗಳ ಅಳವಡಿಕೆಗೆ ಸಂಬಂಧಿಸಿದಂತೆ ನೀಡಲಾಗಿರುವ ಪಟ್ಟಿಯ ಅನುಸಾರ ಕ್ರಮ ಕೈಗೊಂಡು ಛಾಯಾಚಿತ್ರಗಳ ಸಮೇತ ವರದಿಯನ್ನು 15 ದಿನಗಳೊಳಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿಯವರು ತಾಕೀತು ಮಾಡಿದರು. ಹೆದ್ದಾರಿಯ ಕೂಡು ರಸ್ತೆಗಳಲ್ಲಿ ಸರಿಯಾದ ಸೂಚನಾ ಫಲಕಗಳು, ಸಿಗ್ನಲ್ ಲೈಟ್ ಗಳು ಅಳವಡಿಕೆಯಾಗಿಲ್ಲ. ಹೀಗಾಗಿ ವಾಹನ ಸವಾರರಿಗೆ ಗೊಂದಲ ಉಂಟಾಗಿ ಅಪಘಾತಗಳು ಸಂಭವಿಸುತ್ತಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಎಲ್ಲಿ ಸುರಕ್ಷತಾ ವ್ಯವಸ್ಥೆಗಳನ್ನು ಕೈಗೊಳ್ಳಬೇಕಿದೆಯೋ ಅಂತಹ ಕಡೆ ಕೂಡಲೇ ಕ್ರಮವಹಿಸಿ ಕೆಲಸ ನಿರ್ವಹಿಸಬೇಕು. ಯಾವುದೇ ಅವಘಡಗಳಿಗೆ ಅವಕಾಶವಾಗದ ಹಾಗೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ವಾಹನ ಸವಾರರಿಗೆ ಮಾರ್ಗದರ್ಶನ ಮಾಡುವ ಫಲಕಗಳನ್ನು ಅಳವಡಿಸಬೇಕು. ವೇಗತಡೆ, ರಸ್ತೆಡುಬ್ಬ, ರಸ್ತೆ ವಿಭಜಕ, ಇನ್ನಿತರ ಸುರಕ್ಷಿತ ವಿಧಾನಗಳನ್ನು ಪಾಲನೆ ಮಾಡಬೇಕು. ಜಂಕ್ಷನ್ ರಸ್ತೆಯಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಇರಬೇಕು. ಬ್ಲಿಂಕರ್, ಇತರೆ ಅಗತ್ಯ ಅಳವಡಿಕೆ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದರು. ನಗರ, ಪಟ್ಟಣ ವ್ಯಾಪ್ತಿಯಲ್ಲೂ ಸುಗಮ ಸಂಚಾರ ವಾಹನಗಳ ನಿಲುಗಡೆಗೆ ಅವಶ್ಯವಿರುವ ಕೆಲಸವನ್ನು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕು. ಸಂಚಾರ ದಟ್ಟಣೆ ಇರುವ ಮಾರ್ಗಗಳಲ್ಲಿ ಸೂಚನಾ ಫಲಕಗಳನ್ನು ಹಾಕಬೇಕು. ವಾಹನ ನಿಲುಗಡೆಗೆ ಸ್ಥಳ ಗುರುತಿಸಿ ಮಾರ್ಕಿಂಗ್ ಮಾಡಬೇಕು. ನಗರಾಭಿವೃದ್ದಿ ಕೋಶ, ನಗರಸಭೆ ಆಯುಕ್ತರು, ಮುಖ್ಯಾಧಿಕಾರಿಗಳು ಸ್ಥಳ ಪರಿಶೀಲಿಸಿ ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು. ಉಪವಿಭಾಗಾಧಿಕಾರಿ ಬಿ.ಆರ್. ಮಹೇಶ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಎಂ.ಎಸ್. ವಾಬ್ಲೆ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಕಿರಣ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ವಿಶ್ವ, ಲೋಕೋಪಯೋಗಿ ಇಲಾಖೆಯ ಹೆದ್ದಾರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರೇಣುಕ, ಶಾಂತಮ್ಮ, ರೋಟರಿ ಕ್ಲಬ್‌ನ ಎಲೆಕ್ಟ್ ಪ್ರೆಸಿಡೆಂಟ್ ಅಬ್ದುಲ್ ಅಸೀಸ್ ದೀನಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಎಂ.ವಿ. ಸುಧಾ, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಾಯತ್ರಿ ಇತರರು ಉಪಸ್ಥಿತರಿದ್ದರು.
ರಸ್ತೆ ಸುರಕ್ಷತಾ ಸಂಬಂಧ ಕೈಗೊಳ್ಳಬೇಕಿರುವ ಕೆಲಸಗಳ ಕುರಿತು ಈಗಾಗಲೇ ಪರಿಶೀಲಿಸಿ ವಿವರವಾದ ವರದಿ ಕೊಡಲಾಗಿದೆ. ಮತ್ತಷ್ಟು ಅಪಘಾತ ಅನಾಹುತಗಳು ಆಗುವುದನ್ನು ತಪ್ಪಿಸಲು ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇತರೆ ಇಲಾಖೆಗಳು ಮುಂದಾಗಬೇಕು. ಶೀಘ್ರವಾಗಿ ಸುರಕ್ಷತಾ ಕ್ರಮಗಳನ್ನು ಅಳವಡಿಸಬೇಕು. ಪೊಲೀಸ್ ಇಲಾಖೆ ಅಗತ್ಯ ಮಾರ್ಗದರ್ಶನ ಮಾಡಲಿದೆ. ಡಾ.ಬಿ.ಟಿ. ಕವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ