

ಹಾಸನ: ರಸ್ತೆ ಸುರಕ್ಷತೆ ನಿರ್ಲಕ್ಷ್ಯದಿಂದ ಅಮೂಲ್ಯ ಜೀವಗಳು ಬಲಿಯಾಗುತ್ತಿವೆ ಹಾಗಾಗಿ ಎಲ್ಲರೂ ಎಚ್ಚರಿಕೆಯಿಂದ ಚಾಲನೆ ಮಾಡುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜ್ ಅಭಿಪ್ರಾಯಪಟ್ಟರು.
ನಗರದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ರೆಡ್ ಕ್ರಾಸ್ ಭವನದಲ್ಲಿ ಶುಕ್ರವಾರ ಶಾಲಾ ಕಾಲೇಜುಗಳ ವಾಹನ ಚಾಲಕರು, ನಿರ್ವಾಹಕರಿಗೆ ಏರ್ಪಡಿಸಿದ್ದ ಪ್ರಥಮ ಚಿಕಿತ್ಸೆ ಹಾಗೂ ರಸ್ತೆ ಸುರಕ್ಷಿತೆಯ ಬಗ್ಗೆ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಹಲವು ವಾಹನಗಳ ದಾಖಲೆ, ಎಫ್‌ಸಿ ಸರಿ ಇರದಿದ್ದರು ಚಾಲನಾ ಪರವಾನಗಿ ಮುಕ್ತಾಯವಾಗಿದ್ದರೂ ವಾಹನ ಚಲಾವಣೆ ಮಾಡಲಾಗುತ್ತಿದೆ ಈ ಬಗ್ಗೆ ತೀವ್ರ ತಪಾಸಣೆ ಮಾಡಬೇಕಿದ್ದು, ನಿರ್ಲಕ್ಷ್ಯತನಕ್ಕೆ ಕಡಿವಾಣ ಹಾಕಬೇಕು. ದೇಶಗಳಲ್ಲಿ ಹಲವು ಕಾನೂನುಗಳಿದ್ದು ಅದರ ಪಾಲನೆ ಮಾಡದವರ ಮೇಲೆ ಶಿಕ್ಷೆ ವಿಧಿಸಬಹುದು ಆದರೆ ಕಳೆದು ಹೋದ ಜೀವ ಮರಳಿ ತಂದು ಕೊಡಲು ಸಾಧ್ಯವಿಲ್ಲ ಈ ಬಗ್ಗೆ ಎಲ್ಲರೂ ವಿವೇಕವಂತರಾಗಿ ಚಿಂತಿಸಿ ವರ್ತಿಸಬೇಕು ಕಿವಿಮಾತು ಹೇಳಿದರು.
ಕೇವಲ ಅಪಘಾತ ಮಾತ್ರವಲ್ಲ, ಮಕ್ಕಳಿಗೆ ವಾಹನದೊಳಗೆ ನಡೆಯುವ ಕಿರುಕುಳಗಳ ಬಗ್ಗೆ ಜಾಗ್ರತೆ ವಹಿಸಬೇಕು, ಸ್ವಯಂ ನಿಯಂತ್ರಣದ ಜೊತೆಗೆ ಸಂರಕ್ಷಕರಾಗಿ ಚಾಲಕರು, ನಿರ್ವಾಹಕರು ಕಾರ್ಯನಿರ್ವಹಿಸಬೇಕು. ರೆಡ್ ಕ್ರಾಸ್ ಸಂಸ್ಥೆ ಗಂಭೀರ ವಿಚಾರಗಳ ಬಗ್ಗೆ ತರಬೇತಿ ಕಾರ್ಯಾಗಾರ ಏರ್ಪಡಿಸಿದ್ದು ಅತ್ಯಂತ ಅಭಿನಂದನಾರ್ಹವಾದ ವಿಶೇಷ ಪ್ರಯತ್ನ ಎಂದು ಶ್ಲಾಘಿಸಿದರು.ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ ರವಿಕಾಂತ್ ಮಾತನಾಡಿ, ವಾಹನ ಚಾಲಕರ ಜವಾಬ್ದಾರಿ ಸಂರಕ್ಷರ ಸ್ವರೂಪದ್ದಾಗಿದ್ದು, ಅಜಾಗರೂಕತೆ ಸಹಿಸಲಾಗದು ಎಂದ ಅವರು ನಿರ್ಲಕ್ಷ್ಯ ಚಾಲನೆಗೆ ಇರುವ ಶಿಕ್ಷೆ, ನ್ಯಾಯಾಲಯದ ಮಾರ್ಗಸೂಚಿ, ಕಾನೂನು ಅಂಶಗಳ ಬಗ್ಗೆ ವಿವರಿಸಿ ಸಂಚಾರ ನಿಯಮಗಳು ಹಾಗೂ ಉಲ್ಲಂಘನೆಗೆ ಇರುವ ದಂಡನೆ ಬಗ್ಗೆ ತಿಳಿಸಿದರು.
ಇದೇ ವೇಳೆ ಕೋವಿಡ್-19 ಸೋಂಕಿನ ಅಪಾಯ ತಡೆಗೆ ತರಬೇತಿಯಲ್ಲಿ ಪಾಲ್ಗೊಂಡವರಿಗೆ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಮಾಸ್ಕ್ ವಿತರಿಸಲಾಯಿತು.ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಎಚ್.ಪಿ ಮೋಹನ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್ ಮಲ್ಲೇಶ್, ರೆಡ್ ಕ್ರಾಸ್ ಸಂಸ್ಥೆ ನಿರ್ದೇಶಕ ಡಾ. ಭಾರತಿ ರಾಜಶೇಖರ್, ಎಸ್.ಎಸ್ ಪಾಷ ಮಾತನಾಡಿದರು.
ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಹಿರಿಯ ವಾಹನ ತಾಪಸಣಾಧಿಕಾರಿ ಪದ್ಮನಾಭ, ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳಾದ ಎಚ್.ಡಿ ಜಯೇಂದ್ರ ಕುಮಾರ್, ಶಬ್ಬಿರ್ ಅಹಮದ್, ಸುಬ್ಬು ಸ್ವಾಮಿ ಬಿ ಆರ್ ಉದಯಕುಮಾರ್, ಎಚ್.ಡಿ ಕುಮಾರ್, ಕೆ.ಟಿ ಜಯಶ್ರೀ, ಅಂಜದ್ ಖಾನ್, ಮಂಜಪ್ಪ ಗೌಡ ಇತರರು ಇದ್ದರು.