ರಸ್ತೆ ಸಂಚಾರ ತಡೆದು ನಳ್ಳೇನಹಳ್ಳಿ ಗ್ರಾಮಸ್ಥರ ಪ್ರತಿಭಟನೆ

18-pnp 1
ಪಾಂಡವಪುರ ತಾಲೂಕಿನ ನಳ್ಳೇನಹಳ್ಳ ಗ್ರಾಮಸ್ಥರು ಚಿನಕುರಳಿ-ನಾರಾಯಣಪುರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಸತೀಶ್, ಅಶೋಕ್, ಹರೀಶ್, ವಿವೇಕ್, ಪ್ರಸನ್ನ, ಸೌಭಾಗ್ಯಮ್ಮ, ಸಾವಿತ್ರಮ್ಮ, ನಾಗರಾಜು, ನಾಗಣ್ಣ, ಗೋಪಾಲ ಇದ್ದರು.
Published on

ಪಾಂಡವಪುರ: ತಾಲೂಕಿನ ನಳ್ಳೇನಹಳ್ಳಿ ಗ್ರಾಮದ ಗೇಟ್‌ನಲ್ಲಿ ಡಿ.16ರಂದು ಸಂಭವಿಸಿದ್ದ ಅಪಘಾತ ಆಕಸ್ಮಿಕವಲ್ಲ. ಬದಲಾಗಿ ಅದು ಕೊಲೆ ಮಾಡುವ ಉದ್ದೇಶದಿಂದಲೇ ಅಪಘಾತ ಮಾಡಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಭಾನುವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಚಿನಕುರಳಿ-ನಾರಾಯಣಪುರ ರಸ್ತೆಯಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಅಪಘಾತಕ್ಕೆ ಕಾರಣನಾದವನ ವಿರುದ್ಧ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮದ ವೆಂಕಟೇಶ್ ಮತ್ತು ಆತನ ಪತ್ನಿ ಲಕ್ಷ್ಮೀ ಹೊಟೇಲ್ ವ್ಯಾಪಾರ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ಹಿಂದಿರುಗುವಾಗ ಅದೇ ಗ್ರಾಮದ ಉಮೇಶ್ ಎಂಬುವವರಿಗೆ ಸೇರಿದ್ದ ಗೂಡ್ಸ್ ವಾಹನ ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ದಂಪತಿ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಆಸ್ಪತ್ರೆಗೆ ದಾಖಸಿಲಾಗಿ ಚಿಕಿತ್ಸೆಗೆ ಸ್ಪಂದಿಸದೆ ಲಕ್ಷ್ಮೀ ಶನಿವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ತೀವ್ರವಾಗಿ ಗಾಯಗೊಂಡಿರುವ ವೆಂಕಟೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತಕ್ಕೆ ಕಾರಣವಾದ ಬೈಕ್ ಮಾಲೀಕ ಮತ್ತು ಅಪಘಾತಕ್ಕೀಡಾದ ವ್ಯಕ್ತಿಗಳು ಒಂದೇ ಗ್ರಾಮದವರಾಗಿದ್ದು, ಗ್ರಾಮದ ಗೇಟ್ ಬಳಿ ಇಬ್ಬರೂ ಹೊಟೇಲ್ ನಡೆಸುತ್ತಿದ್ದಾರೆ. ಅಪಘಾತಕ್ಕೀಡಾದ ವೆಂಕಟೇಶ್ ತನಗಿಂತ ಹೆಚ್ಚಿನ ವ್ಯಾಪಾರ ಮಾಡುತ್ತಿದ್ದು, ಆತ ಹೊಟೇಲ್ ಪ್ರಾರಂಭಿಸಿದ ಮೇಲೆ ವ್ಯಾಪಾರ ಕಡಿಮೆಯಾಗಿದೆ ಎಂದು ಜಿದ್ದು ಸಾಧಿಸಿ ದಂಪತಿ ಮನೆಗೆ ತೆರಳುವ ಸಮಯ ನೋಡಿಕೊಂಡು ಅಪಘಾತವೆಸಗಿ ಕೊಲೆ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗ್ರಾಮದ ಗೇಟ್‌ನಲ್ಲಿರುವ ಅಂಗಡಿಗಳಲ್ಲಿ ಮದ್ಯ ಮರಾಟ ಹೆಚ್ಚಾಗಿದ್ದು, ಈ ಕಾರಣಕ್ಕಾಗಿಯೇ ಇಬ್ಬರ ನಡುವೆ ಜಿದ್ದು ಉಂಟಾಗಿತ್ತು. ಹೀಗಾಗಿ ಗೇಟ್‌ನಲ್ಲಿರುವ ಎಲ್ಲ ಅಂಗಡಿಗಳನ್ನು ತೆರವುಗೊಳಿಸಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದ ಸಿಪಿಐ ವಿವೇಕಾನಂದ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗು ವುದು. ಆರೋಪ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಪೆಟ್ಟಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಕೂಡದು. ದಾಳಿ ನಡೆಸಿದ ವೇಳೆ ಮದ್ಯ ಮಾರಾಟ ಮಡುತ್ತಿರುವುದು ಸಾಬೀತಾದರೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟರು.

ಪ್ರತಿಭಟನೆಯಲ್ಲಿ ಸೈನಿಕ ಸತೀಶ್, ಅಶೋಕ್, ಹರೀಶ್, ವಿವೇಕ್, ಪ್ರಸನ್ನ, ಸೌಭಾಗ್ಯಮ್ಮ, ಸಾವಿತ್ರಮ್ಮ, ನಾಗರಾಜು, ನಾಗಣ್ಣ, ಗೋಪಾಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net