

ಸೇಡಂ: ಮೂರು ದಿನದ ಮಳೆಯಿಂದಾಗಿ ತಾಲೂಕಿನಾದ್ಯಂತ ಬೆಳೆ ಹಾನಿ, ರಸ್ತೆ ಕೊಚ್ಚಿ ಹೋಗಿದ್ದು, ಶಾಲಾ ಕಟ್ಟಡಗಳ ವಸ್ತುಸ್ಥಿತಿ ಕುರಿತು ಅಧಿಕಾರಿಗಳು ತಕ್ಷಣ ವರದಿ ಸಲ್ಲಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ತಾಕೀತು ಮಾಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಅತಿವೃಷ್ಟಿಯಿಂದಾದ ಹಾನಿ ಕುರಿತು ಸೇಡಂ, ಚಿಂಚೋಳಿ, ಕಾಳಗಿ ತಾಲೂಕಿನ ಅಧಿಕಾರಿಗಳ ಸಭೆ ನಡೆಸಿದ ಅವರು, ಮತಕ್ಷೇತ್ರದಲ್ಲಿ ಆದ ಹಾನಿ ಕುರಿತು ಮಾಹಿತಿ ಪಡೆದರು.
ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದ ಅಧಿಕಾರಿಗಳು ಮಾತನಾಡಿ, ತಾಲೂಕಿನಲ್ಲಿ 10 ರಸ್ತೆ, 3 ಕೆರೆ ಹಾನಿಯಾಗಿದ್ದು, ದುರಸ್ತಿಗೆ 175 ಲಕ್ಷ ರೂ. ಅಗತ್ಯವಿದೆ ಎಂದು ಹೇಳಿದರು. ತಾಲೂಕಿನ 34 ಕೆರೆ ತುಂಬಿದ್ದು, ಯಾವುದೇ ಹಾನಿಯಾಗಿಲ್ಲ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸಭೆಯ ಗಮನಸೆಳೆದಾಗ, ಕೆರೆ ತುಂಬಿದ್ದರಿAದ ಸಂಭವನೀಯ ಅನಾಹುತದ ಬಗ್ಗೆ ಎಚ್ಚರ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ಕ್ರಮವಾಗಿ ಮಳೆ ಪ್ರಮಾಣ ಮತ್ತು ಬೆಳೆ ಹಾನಿ ಬಗ್ಗೆ ಮಾಹಿತಿ ನೀಡಿದರು. ಕುರಕುಂಟಾ ಗ್ರಾಮದ 40 ವರ್ಷದ ವ್ಯಕ್ತಿ ಪ್ರವಾಹಕ್ಕೆ ಕೊಚ್ಚಿ ಹೋಗಿರುವ ಬಗ್ಗೆ ಮಾಹಿತಿ ಪಡೆದ ಸಚಿವರು, ಕೂಡಲೇ ಪತ್ತೆ ಹಚ್ಚುವಂತೆ ಪೊಲೀಸರಿಗೆ ಸೂಚನೆ ನೀಡಿದರು.
ಸಿಪಿಐ ಮಹಾದೇವ ದಿಡ್ಡಿಮನಿ ಮಾತನಾಡಿ, ಕೊಚ್ಚಿ ಹೋದವನ ಶೋಧ ಶೋಧ ನಡೆದಿದ್ದು, ಎಸ್‌ಡಿಅರ್‌ಎಫ್, ಅಗ್ನಿಶಾಮಕ ತಂಡದ ನೆರವು ಪಡೆಯಲಾಗಿದೆ ಎಂದು ತಿಳಿಸಿದರು.
ಪಟ್ಟಣದ ಕೆಲ ಏರಿಯಾಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದು, ತಹಸೀಲ್ದಾರರಿಗೆ ಮನೆಗಳ ಪಟ್ಟಿ ನೀಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಶರಣಯ್ಯ ಸ್ವಾಮಿ ತಿಳಿಸಿದರು. ಮಳೆಯಿಂದ ಶಾಲೆಗಳು ಹಾನಿಯಾದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುಖ್ಯಗುರುಗಳಿಂದ ಮಾಹಿತಿ ಪಡೆದು ವರದಿ ಸಲ್ಲಿಸಬೇಕು ಎಂದು ಸಚಿವರು ಹೇಳಿದರು.
ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಮಳೆಯಿಂದಾಗುವ ಹಾನಿ ಬಗ್ಗೆ ಮೇಲಧಿಕಾರಿಗಳಿಗೆ ಪ್ರತಿದಿನ ವರದಿ ನೀಡಬೇಕು. ಹಾನಿಯಾದ ಮನೆ, ನೀರು ನುಗ್ಗಿದ ಪ್ರಕರಣಗಳಲ್ಲಿ ನಿಯಮಾವಳಿಯಂತೆ ಪರಿಹಾರ ವಿತರಿಸಬೇಕು ಎಂದು ತಹಸೀಲ್ದಾರ್ ಶ್ರೀಯಾಂಕಾ ಧನಶ್ರೀ ಅವರಿಗೆ ಸೂಚಿಸಿದರು. ಸಂಸದ ರಾಧಾಕೃಷ್ಣ ದೊಡ್ಡಮನಿ, ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಾಪಂ ಇಒಗಳಾದ ಚನ್ನಪ್ಪ ರಾಯಣ್ಣವರ, ಶಂಕರ ರಾಠೋಡ್ ಇತರರಿದ್ದರು.